“ರಾಜ್‌ಗಢದಲ್ಲಿ 400 ಮಂದಿ ನಾಮಪತ್ರ ಸಲ್ಲಿಸಿದರೆ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕ ಚುನಾವಣೆ ನಡೆಯಲಿದೆ” ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದರು. ದಿಗ್ವಿಜಯ್ ಸಿಂಗ್ ಮಧ್ಯಪ್ರದೇಶದ ರಾಜ್‌ಗಢ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ತಾನು ಮತಪತ್ರದ ಮೂಲಕ ಚುನಾವಣೆ ನಡೆಸುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಸುಸ್ನರ್‌ನ ಕಚ್ನಾರಿಯಾ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್ ಜನರು ಇವಿಎಂ ಅಥವಾ ಬ್ಯಾಲೆಟ್ ಪೇಪರ್ ಪೈಕಿ ಯಾವುದನ್ನು ಆಯ್ಕೆ ಮಾಡುವುದಾಗಿ ಪ್ರಶ್ನಿಸಿದರು. ಬ್ಯಾಲೆಟ್ ಪೇಪರ್ ಎಂದು ಕೂಗಿದ ಜನರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ, “ಇದಕ್ಕೆ ಒಂದೇ ಒಂದು ಮಾರ್ಗವಿದೆ (ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ) 400 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ ಮಾತ್ರ ಅದು ಸಾಧ್ಯ. ನಾನು ಇದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಇವಿಎಂ ಹ್ಯಾಕ್ ಮಾಡಬಹುದೇ?; ಚುನಾವಣಾ ಪ್ರಕ್ರಿಯೆಯ ನಿಜವಾದ ಸಮಸ್ಯೆಯೇನು?
“ಸಾಮಾನ್ಯ ವರ್ಗದ ಅಭ್ಯರ್ಥಿಗಳು ಭದ್ರತಾ ಠೇವಣಿಯಾಗಿ 25,000 ರೂಪಾಯಿ ನೀಡಬೇಕಾಗುತ್ತದೆ. ಇನ್ನು ಕಾದಿರಿಸಲಾದ ವರ್ಗದವರಾದರೆ 12,500 ರೂಪಾಯಿ ಭದ್ರತಾ ಠೇವಣಿ ಪಾವತಿ ಜಮೆ ಮಾಡಬೇಕಾಗುತ್ತದೆ. ಇದರಿಂದಾಗಿ ಮಾತ್ರ ರಾಜ್‌ಗಢದಲ್ಲಿ ಬ್ಯಾಲೆಟ್ ಪೇಪರ್‌ಗಳ ಮೂಲಕ ಚುನಾವಣೆ ನಡೆಸಬಹುದು. ಏನಾಗುತ್ತದೋ ನೋಡೋಣ” ಎಂದರು.
ಪ್ರತಿ ಇವಿಎಂನಲ್ಲಿ ಪ್ರತಿ ಕ್ಷೇತ್ರಕ್ಕೆ ನೋಟಾ ಸೇರಿದಂತೆ ಗರಿಷ್ಠ 384 ಅಭ್ಯರ್ಥಿಗಳನ್ನು ಹೊಂದಬಹುದು. ನೋಟಾ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ಒಂದು ಬ್ಯಾಲೆಟ್ ಯೂನಿಟ್‌ನಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಅಂತಹ 24 ಘಟಕಗಳನ್ನು ಏಕಕಾಲದಲ್ಲಿ ನಿಯಂತ್ರಣ ಘಟಕಕ್ಕೆ ಸಂಪರ್ಕಿಸಬಹುದು.
ಇನ್ನು ‘ವೈದ ನಿಭೋ ಯಾತ್ರೆ’ಯಲ್ಲಿ ಮಾತನಾಡಿದ್ದ ಸಿಂಗ್, ಚುನಾವಣೆಗೆ ಇವಿಎಂಗಳ ಬಳಕೆಯನ್ನು ವಿರೋಧಿಸಿದ್ದರು. ಬಿಜೆಪಿ ಗೆಲುವಿಗೆ ಅದೇ ಕಾರಣವೆಂದು ದೂರಿದ್ದರು.