ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಆರು ತಿಂಗಳ ನಂತರ ಸುರಿದ ತುಂತುರು ಮಳೆ ಅಯೋಧ್ಯೆಯ ಚಿತ್ರಣವನ್ನು ಬದಲಿಸಿದೆ. ಪಟ್ಟಣವು ಜಲಾವೃತಗೊಂಡು ರಸ್ತೆಗಳು ಗುಂಡಿಬಿದ್ದಿವೆ. ರಾಮಮಂದಿರ ಛಾವಣಿ ಸೋರುತ್ತಿದೆ. ಇದು, ಅಯೋಧ್ಯೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಪ್ರಶ್ನೆಗಳು ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ.
ಲೋಕಸಭಾ ಚುನಾವಣೆಯ ವಸ್ತಿಲಿನಲ್ಲಿ ತರಾತುರಿಯಲ್ಲಿ ಅರ್ಧಂಬರ್ಧ ನಿರ್ಮಾಣಗೊಂಡಿದ್ದ ರಾಮಮಂದಿರವನ್ನು ಜನವರಿ 22ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಆಗ ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡಲಾಗಿತ್ತು. ಆದರೆ, ಆ ಸೌಂದರ್ಯ ಕಳಪೆ ಗುಣಮಟ್ಟದ್ದು ಎಂಬುದನ್ನು ಈ ವರ್ಷದ ಮೊದಲ ಮಳೆ ಬಟಾಬಯಲುಮಾಡಿದೆ. ರಾಮಮಂದಿರಕ್ಕೆ ಹೋಗಲು ಹೊಸದಾಗಿ ನಿರ್ಮಿಸಲಾಗಿದ್ದ 14 ಕಿ.ಮೀ ಉದ್ದದ ‘ರಾಮ್ ಫಥ್’ ಎಂಬ ರಸ್ತೆ ಉದ್ದಕ್ಕೂ ಗುಂಡಿಬಿದ್ದಿದೆ.
ವಾಹನ ಸವಾರರಿಗೆ ತೊಂದರೆಯಾಗದಂತೆ ಆ ರಸ್ತೆಯನ್ನು ಅಧಿಕಾರಿಗಳು ತಕ್ಷಣವೇ ದುರಸ್ತಿ ಮಾಡಿಸಿದ್ದಾರೆ. ಅದಾಗ್ಯೂ, ಯೋಗಿ ಆದಿತ್ಯನಾಥ್ ಸರ್ಕಾರವು ‘ನಿರ್ಲಕ್ಷ್ಯ’ದ ಆರೋಪದ ಮೇಲೆ ಆರು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
“ದೇವಾಲಯದ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ದೇವಾಲಯದ ಆವರಣದಲ್ಲಿ ನೀರು ಸಂಗ್ರಹವಾಗುತ್ತಿದೆ. ದೇವಸ್ಥಾನದ ಆವರಣದಲ್ಲಿದ್ದ ಮಳೆ ನೀರನ್ನು ಹೊರ ಹಾಕಲು ಯಾವುದೇ ವ್ಯವಸ್ಥೆ ಇಲ್ಲ” ಎಂದು ರಾಮಮಂದಿರದ ಮುಖ್ಯ ಅರ್ಚಕರು ದೂರಿದ್ದಾರೆ.
ಸೋರಿಕೆಯ ಆರೋಪವನ್ನು ತಿರಸ್ಕರಿಸಿದ ದೇವಾಲಯದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, “ದೇವಾಲಯದ ಛಾವಣಿಯಿಂದ ಗರ್ಭಗುಡಿಗೆ ‘ಒಂದು ಹನಿ ನೀರು’ ಬಂದಿಲ್ಲ. ದೇವಸ್ಥಾನದಲ್ಲಿ ಮಳೆ ನೀರು ಹರಿದು ಹೋಗಲು ಉತ್ತಮ ವ್ಯವಸ್ಥೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
“ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿರುವುದು ಕಂಡುಬಂದಿದ್ದರೂ, ದೇವಾಲಯದ ಮೊದಲ ಮಹಡಿಯಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯಿಂದಾಗಿ ಕೊಳವೆ ಪೈಪ್‌ನಿಂದ ನೀರು ಬರುತ್ತಿದೆ” ಎಂದು ರೈ ಸಮರ್ಥಿಸಿಕೊಂಡಿದ್ದಾರೆ.
“ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಪೂಜಾ ಸ್ಥಳಗಳು ಕೂಡ ಬಿಜೆಪಿಗೆ ಲೂಟಿಯ ಮೂಲಗಳಾಗಿವೆ” ಎಂದು ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ಅಜಯ್ ರೈ ಆರೋಪಿಸಿದ್ದಾರೆ.