ಪೆನ್‌ಡ್ರೈವ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಕಾಂಗ್ರೆಸ್ ಒಪ್ಪುವುದಿಲ್ಲ. ಹೀಗಾಗಿ ನ್ಯಾಯಾಧೀಶರಿಂದಲೇ ಪ್ರಕರಣದ ತನಿಖೆ ನಡೆಸಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಆಗ್ರಹಿಸಿದರು.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಪೆನ್‌ಡ್ರೈವ್ ಹಂಚಿದವರನ್ನೂ ಬಂಧಿಸಬೇಕು” ಎಂದು ಒತ್ತಾಯಿಸಿದರು.
“ರಾಜ್ಯ ಸರ್ಕಾರವು ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ್ದನ್ನು ಮೊದಲ ದಿನವೇ ಜೆಡಿಎಸ್ ಸ್ವಾಗತಿಸಿದ್ದು, ನ್ಯಾಯ ಸಮ್ಮತ ತನಿಖೆಗೆ ಒತ್ತಾಯಿಸಿದ್ದೆವು. ಆದರೆ ಇಡೀ ಪ್ರಕರಣ ವನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತಮಗೆ ಬೇಕಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಯಾರನ್ನು ಬಂಧಿಸಬೇಕು, ಯಾರನ್ನು ಬಿಡಬೇಕು ಎಂದು ಡಿ ಕೆ ಶಿವಕುಮಾರ್ ಅಣತಿಯಂತೆ ಎಸ್‌ಐಟಿ ಅಧಿಕಾರಿಗಳು ನಡೆಯುತ್ತಿದ್ದಾರೆ” ಎಂದು ಆರೋಪಿಸಿದರು.
“ಪ್ರಕರಣದಲ್ಲಿ ಪೆನ್ ಡ್ರೈವ್ ಹಂಚಿದವರು ಸಹ ಶಿಕ್ಷೆಗೆ ಅರ್ಹರು. ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿರುವಂತೆ ಪೆನ್‌ಡ್ರೈವ್ ಬಿಡುಗಡೆಯಲ್ಲಿ ಡಿ ಕೆ ಶಿವಕುಮಾರ್ ಪಾತ್ರವೇ ಪ್ರಮುಖವಾಗಿದೆ. ಹೀಗಾಗಿ ಕೂಡಲೇ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಶಿವರಾಮೇಗೌಡ, ಡಿಕೆಶಿ ಆಡಿಯೊ ಬಗ್ಗೆ ಕೂಡ ನ್ಯಾಯಾಂಗ ತನಿಖೆಯಾಗಬೇಕು” ಎಂದರು.
ಪೊಲೀಸರಿಂದಲೂ ಷಡ್ಯಂತ್ರ : ಸಾ ರಾ ಆರೋಪ
“ರೇವಣ್ಣ ವಿರುದ್ಧ ಆರೋಪ ಮಾಡಿರುವ ಮಹಿಳೆಯನ್ನು ರೇವಣ್ಣ ಆಪ್ತ ರಾಜಗೋಪಾಲ್ ಎಂಬುವರ ತೋಟದ ಮನೆಯಿಂದ ರಕ್ಷಣೆ ಮಾಡಲಾಗಿದೆ ಎಂಬುದು ಸುಳ್ಳು. ಈ ಬಗ್ಗೆ ವಿಡಿಯೊ ಸಮೇತ ಪೊಲೀಸರು ದಾಖಲೆ ನೀಡಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ” ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ಸವಾಲು ಹಾಕಿದರು.
