ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ, ‘ಉಪ್ಪು ತಿಂದವ ನೀರು ಕುಡಿಯಲೇಬೇಕು’ ಎನ್ನುವ ಮೂಲಕ ಶಿಕ್ಷೆಯಾಗಲಿ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ ಪರ ಬ್ಯಾಟಿಂಗ್ ಮಾಡಿದ್ದಾರೆ.
ರಾಯಚೂರಿನಲ್ಲಿ ಇಂದು(ಶುಕ್ರವಾರ) ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಮಾರ್ಕೆಟ್‌ನಲ್ಲಿ ಹರಿದಾಡಿರುವ ಫೋಟೋಗಳಲ್ಲಿ ಪ್ರಜ್ವಲ್ ರೇವಣ್ಣ ಅವರ ಮುಖಾನೇ ಇಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು 400 ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ನಿನ್ನೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡಿದ ಕುಮಾರಸ್ವಾಮಿ, “ಸಿಎಂ ಸಿದ್ದರಾಮಯ್ಯನವರು ದೇಶದ ಭಾವೀ ಪ್ರಧಾನಿ ಎಂದು ಹೇಳಿಕೊಳ್ಳುವ ರಾಹುಲ್ ಗಾಂಧಿಯವರು ನಿನ್ನೆ ಹೇಳಿಕೆ ನೀಡುತ್ತಾ, ಪ್ರಜ್ವಲ್ ರೇವಣ್ಣ ಅವರು 400 ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ. ಆ ಹೆಣ್ಣು ಮಕ್ಕಳ ಫೋಟೋಗಳನ್ನು ಹಾಕಿಕೊಂಡಿದ್ದೀರಲ್ವಾ, ಅದರಲ್ಲಿ ಎಲ್ಲೂ ಪ್ರಜ್ವಲ್ ರೇವಣ್ಣ ಮುಖಾನೇ ಇಲ್ಲ. ಈ ವಿಷಯವನ್ನು ನನಗ್ಯಾರೋ ಹೇಳಿದ್ದರು. ನಾನಂತೂ ನೋಡಿಲ್ಲ. ನೋಡಿದವರು ಇದನ್ನು ಹೇಳುತ್ತಿದ್ದಾರೆ. ನನಗೇನೂ ವಿಷಯ ಗೊತ್ತಿಲ್ಲ. ಆದರೂ ಕೂಡ ಸಹಿಸಿಕೊಂಡಿದ್ದೇವೆ” ಎಂದು ತಿಳಿಸಿದರು.
“ತಪ್ಪಿತಸ್ಥನಿಗೆ ಶಿಕ್ಷೆಯಾಗಲೇಬೇಕು. ಅದರಲ್ಲಿ ನನಗೆ ಯಾವುದೇ ರಾಜಿ ಇಲ್ಲ. ಈ ಪ್ರಕರಣ ಹೊರಬಂದ ತಕ್ಷಣ ಮಾರ್ಫ್ ಮಾಡಿದ್ದಾರೆ, ಅವನಿಗೆ ಸಂಬಂಧವೇ ಇಲ್ಲ, ತಂತ್ರಜ್ಞಾನಗಳನ್ನು ಬಳಸಿಕೊಂಡಿದ್ದಾರೆ ಎಂದು ಬೇರೆಯವರು ಹೇಳಿದಂತೆ ಹೇಳಿದ್ದೇವಾ” ಎಂದು ಪ್ರಶ್ನಿಸಿದ ಕುಮಾರಸ್ವಾಮಿ, “ನಾವು ಧೈರ್ಯವಾಗಿ ಹೇಳಿದ್ದೇವೆ. ಯಾರೇ ತಪ್ಪು ಮಾಡಲಿ, ತಪ್ಪಿತಸ್ಥನಿಗೆ ಶಿಕ್ಷೆ ಕೊಡಿ, ತನಿಖೆ ಮಾಡಿ ಅಂತ ನೇರವಾಗಿ ಹೇಳಿದ್ದೇವೆ. ಪದೇ ಪದೇ ಈ ಪ್ರಕರಣದಲ್ಲಿ ದೇವೇಗೌಡ, ಕುಮಾರಸ್ವಾಮಿ ಹೆಸರು ತರಬೇಡಿ” ಎಂದು ಹೇಳಿದರು.
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ರಾಹುಲ್ ಗಾಂಧಿಯವರಿಗೆ ತಕ್ಷಣ ಎಸ್‌ಐಟಿ ನೋಟಿಸ್ ಕಳುಹಿಸಬೇಕು. ಯಾಕೆಂದರೆ ಅವರಲ್ಲಿ ಇನ್ನೂ ಹೆಚ್ಚು ಮಾಹಿತಿ ಇರಬಹುದು. ಒಬ್ಬ ಮಾಜಿ ಪ್ರಧಾನಿಯ ಮಗ ನೀಡುವ ಹೇಳಿಕೆಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಯಾವ ಆಧಾರದಲ್ಲಿ ಈ ಹೇಳಿಕೆ ನೀಡಿದ್ದೀರಾ? ಪ್ರಧಾನಮಂತ್ರಿ ಮೋದಿಯವರ ಹೆಸರನ್ನು ವಿಶ್ವದಲ್ಲಿ ಕೆಡಿಸಲು ಇದರಿಂದ ಯತ್ನಿಸುತ್ತಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಕೊಡುವುದು ಕಾಂಗ್ರೆಸ್‌ನವರಿಗೆ ಬೇಕಿಲ್ಲ. ಇಂತಹ ಚಿಲ್ಲರೆ ರಾಜಕಾರಣ ಬಿಟ್ಟುಬಿಡಿ” ಎಂದರು.
“ಚುನಾವಣೆಯಲ್ಲಿ ಓಟು ಪಡೆಯಬೇಕು. ಮೋದಿಯವರ ಹೆಸರು ಹಾಳು ಮಾಡಬೇಕು ಎನ್ನುವುದು ಕಾಂಗ್ರೆಸ್‌ನ ಉದ್ದೇಶವಷ್ಟೇ. ಈ ಪ್ರಕರಣದಲ್ಲಿ ಮೋದಿ ಪಾತ್ರ ಇದರಲ್ಲಿ ಏನಿದೆ? ಇದಕ್ಕೆಲ್ಲ ಕಾಲವೇ ಉತ್ತರಿಸಲಿದೆ. ಆ ಕಾಲ ಯಾವಾಗ ಬರುತ್ತದೆ ಎಂದು ಇವತ್ತು ಹೇಳುವುದಿಲ್ಲ. ಎಲ್ಲ ದಾಖಲೆಗಳೊಂದಿಗೆ ಹೇಳುತ್ತೇನೆ. ನಾವು ಪಲಾಯನವಾದ ಮಾಡಲ್ಲ” ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
“ನಾನೇ ವಿಡಿಯೋವನ್ನು ಹೊರಗಡೆ ಬಿಡುಗಡೆ ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ವಿಡಿಯೋ ಬಿಡುಗಡೆ ಮಾಡಲು ನನಗೆ ಏನು ಹುಚ್ಚು ಹಿಡಿದಿದ್ಯಾ? ಟೆಂಟ್‌ನಲ್ಲಿ ಬ್ಲೂ ಫಿಲಂ ಬಿಡುಗಡೆ ಮಾಡುವವರು ಇದನ್ನು ಮಾಡಿದ್ದಾರೆ. ಅದನ್ನೇ ಇಲ್ಲೂ ಮುಂದುವರಿಸಿದ್ದಾರೆ” ಎನ್ನುವ ಮೂಲಕ ಡಿ ಕೆ ಶಿವಕುಮಾರ್ ಹೆಸರೆತ್ತದೇ ಕುಮಾರಸ್ವಾಮಿಯವರು ಪರೋಕ್ಷವಾಗಿ ಕಿಡಿಕಾರಿದರು.
“ನಮ್ಮ ತಂದೆ-ತಾಯಿಗೆ ಆತ್ಮ ಸ್ಥೈರ್ಯ ತುಂಬಲು ನಾನು ಎರಡು ದಿನ ಬೆಂಗಳೂರಿನಲ್ಲಿದ್ದೆ. ನನ್ನ ತಂದೆ ತಾಯಿ ಜೀವಕ್ಕೆ ಅಪಾಯ ಆಗಬಾರದು. ಅವರು ಯಾವ ರೀತಿ ಬದುಕಿದ್ದಾರೆ ಅಂತ ನೀವು ಮರೆತಿರಬಹುದು. ಅವರಿಗೆ ಏನೂ ಹೆಚ್ಚು ಕಡಿಮೆ ಆಗಬಾರದಂತೆ ನಾನು ನೋಡಿಕೊಳ್ಳುತ್ತಿದ್ದೇನೆ. ಸಿದ್ದರಾಮಯ್ಯನವರೇ, ಇಷ್ಟು ದಿನ ಎಸ್‌ಐಟಿ ರಚನೆ ಮಾಡಿದ್ದೀರಲ್ಲವೇ? ಯಾವುದರಲ್ಲಿ ಶಿಕ್ಷೆಯಾಗಿದೆ” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
