ಲೈಂಗಿಕ ಹಗರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 31 ರಂದು ಎಸ್‌ಐಟಿ ಪೊಲೀಸರೆದುರು ಹಾಜರಾಗಿ ತನಿಖೆಗೆ ಸಹಕರಿಸುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾನೆ.
“ನನ್ನನ್ನು ತಪ್ಪು ತಿಳಿಯಬೇಡಿ. ಮೇ 31 ರಂದು 10 ಗಂಟೆಗೆ ನಾನು ಎಸ್‌ಐಟಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ. ನಾನು ನ್ಯಾಯಾಂಗವನ್ನು ನಂಬಲಿದ್ದು, ಇವೆಲ್ಲವು ನನ್ನ ವಿರುದ್ಧವಿರುವ ಸುಳ್ಳು ಪ್ರಕರಣಗಳಾಗಿವೆ. ನಾನು ಕಾನೂನನ್ನು ನಂಬುತ್ತೇನೆ” ಎಂದು ತಿಳಿಸಿದ್ದಾನೆ.
“ನಾನು ವಿದೇಶಕ್ಕೆ ಹೋಗಿರುವ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ನಾನು ನನ್ನ ಕುಟುಂಬ, ಕುಮಾರ ಸ್ವಾಮಿ ಅವರು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸುತ್ತೇನೆ. ಏ.26ರಂದು ಚುನಾವಣೆ ಮುಗಿದಿತ್ತು. ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.ಎಸ್‌ಐಟಿ ಕೂಡ ರಚನೆಯಾಗಿರಲಿಲ್ಲ. ನಾನು ಹೋದ ಎರಡು ಮೂರು ದಿನದ ನಂತರ ನನ್ನ ವಿರುದ್ಧ ಯೂಟ್ಯೂಬ್‌ನಲ್ಲಿ ಆರೋಪಗಳನ್ನು ನಾನು ಗಮನಿಸಿದೆ. ನಾನು ಎಸ್‌ಐಟಿಗೆ ನನ್ನ ವಕೀಲರ ಮೂಲಕ 7 ದಿನಗಳ ಒಳಗೆ ಹಾಜರಾಗುವುದಾಗಿ ತಿಳಿಸಿದ್ದೇನೆ” ಎಂದು ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ತಿಳಿಸಿದ್ದಾನೆ.
“ಇದೊಂದು ರಾಜಕೀಯ ಪಿತೂರಿಯಾಗಿದ್ದು, ನಾನು ಖಿನ್ನತೆಗೆ ಒಳಗಾಗಿ ಏಕಾಂಗಿಯಾಗಿ ನಾನು ಇರುವ ಬಗ್ಗೆ ಮಾಹಿತಿ ಒದಗಿಸದ ಕಾರಣ ಕ್ಷಮೆಯಾಚಿಸುತ್ತೇನೆ” ಎಂದು ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಹೇಳಿದ್ದಾನೆ.
ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವೆಸಗಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕ ಸರ್ಕಾರ ಕೂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರು ಕೂಡ ಈತನ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?
ಏ.26ರಂದು ರಾಜ್ಯದಲ್ಲಿ ನಡೆದ ಲೋಕಸಭೆ ಚುನಾವಣೆ ನಂತರ ದೇಶದಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಹಲವು ದಿನಗಳ ನಂತರವೂ ವಿಚಾರಣೆಗೆ ಹಾಜರಾಗದ ಕಾರಣ ಆರೋಪಿಯ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದರು.
ಪಕ್ಷದಿಂದ ಅಮಾನತುಗೊಳಿಸಿರುವುದಲ್ಲದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೂಡ ತಕ್ಷಣ ದೇಶಕ್ಕೆ ಹಾಜರಾಗಿ ತನಿಖೆ ಎದುರಿಸುವಂತೆ ಎಚ್ಚರಿಕೆ ನೀಡಿದ್ದರು. ದೇಶದ ಅತೀ ದೊಡ್ಡ ಲೈಂಗಿಕ ಹಗರಣವಾದ ಕಾರಣ ಪ್ರಗತಿಪರ ಹಾಗೂ ಸಾಮಾಜಿಕ ಸಂಘಟನೆಗಳು ಕೂಡ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು.
