ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಆರೋಪಿಯಾಗಿರುವ ಲೈಂಗಿಕ ಹಗರಣದ ತನಿಖೆ ನಡೆಯುತ್ತಿದೆ. ಈ ನಡುವೆ, ತನ್ನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಹಲವಾರು ಮಹಿಳೆಯರನ್ನು ಪ್ರಜ್ವಲ್ ರೇವಣ್ಣ ಬೆದರಿಸಿ, ಆಮಿಷವೊಡ್ಡಿ, ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ತಾನು ಎಸಗಿದ್ದ ಕೃತ್ಯಗಳನ್ನು ತಾನೇ ವಿಡಿಯೋ ಮಾಡಿಕೊಂಡು ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ವಿಡಿಯೋಗಳಿದ್ದ ಪೆನ್‌ಡ್ರೈವ್‌ಗಳು ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಹಾಸನ ನಗರದಾದ್ಯಂತ ಪತ್ತೆಯಾಗಿದ್ದವು.
ಪೆನ್‌ಡ್ರೈವ್‌ನಿಂದಾಗಿ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಕೃತ್ಯಗಳು ಬೆಳಕಿಗೆ ಬಂದಿದ್ದವು. ಬಳಿಕ, ಪ್ರಜ್ವಲ್ ರೇವಣ್ಣನನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ, ಪ್ರಜ್ವಲ್ ರೇವಣ್ಣ ಜೈಲಿನಲ್ಲಿಯೇ ಇದ್ದಾರೆ. ಆತ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಹಲವು ಬಾರಿ ವಜಾಗೊಳಿಸಿದೆ.
ಇದೀಗ, ಕೆ.ಆರ್ ನಗರದ ಸಂತ್ರಸ್ತ ಮಹಿಳೆಯೊಬ್ಬರು ಆತನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಆತನ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ನಿಗದಿ ಪಡಿಸಿದೆ.
ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯಾಗಿರುವ ಓರ್ವ ಮಹಿಳೆಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಮತ್ತು ಅವರ ಪತ್ನಿ ಭವಾನಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಇಬ್ಬರೂ ಜಾಮೀನು ಪಡೆದು ಹೊರಬಂದಿದ್ದಾರೆ.