ಶಾಸಕ ಎಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ದುರುದ್ದೇಶಪೂರ್ವಕವಾಗಿ ದೂರು ನೀಡಲಾಗಿದೆ ಎಂದು ದೂರು ನೀಡಿರುವ ಸಂತ್ರಸ್ತೆಯ ಸಂಬಂಧಿಕರು ಆರೋಪಿಸಿದ್ದಾರೆ.
ಹಾಸನ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತೆಯ ಅತ್ತೆ ಗೌರಮ್ಮ, “ಸಂತ್ರಸ್ತೆಯು ನಮ್ಮ ಮನೆಯಲ್ಲೆ ಇದ್ದರು. ವಿಪರೀತ ಸಾಲ ಮಾಡಿಕೊಂಡು ಸಾಲ ತೀರಿಸಲು ಮನೆ, ಹಾಗೂ ಜಮೀನನ್ನು ಮಾರಿಕೊಂಡಿದ್ದರು. ನಂತರ ನಾವು ಭವಾನಿ ಅವರ ಬಳಿ ತೆರಳಿ ಸಂತ್ರಸ್ತೆಗೆ ಏನಾದರೂ ಕೆಲಸ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದರಿಂದ ಸಂತ್ರಸ್ತೆಗೆ ಹಾಸ್ಟೆಲ್‌ನಲ್ಲಿ ಕೆಲಸ ಕೊಡಿಸಿದ್ದರು” ಎಂದು ತಿಳಿಸಿದರು.
“ನಂತರ ಹಾಸ್ಟೆಲ್‌ನಲ್ಲಿ ಕೆಲಸ ಬಿಡಿಸಿ ಭವಾನಿ ರೇವಣ್ಣ ಅವರ ಮನೆಯಲ್ಲೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಐದು ವರ್ಷ ಕೆಲಸ ಮಾಡಿ ನಂತರ ನಾನು ಅವರ ಮನೆಯ ಕೆಲಸ ಮಾಡುವುದಿಲ್ಲ ಎಂದು ಹಠಹಿಡಿದಿದ್ದರು. ಈ ಸಂದರ್ಭದಲ್ಲಿ ಭವಾನಿ ಅವರು ನಮ್ಮನ್ನು ಮನೆಗೆ ಕರೆಸಿ ಸಂತ್ರಸ್ತೆ ಕೆಲಸ ಬಿಡುವುದಾಗಿ ಹೇಳುತ್ತಿರುವುದಾಗಿ ತಿಳಿಸಿದರು. ಈ ವೇಳೆ ನಾವು ಸಂತ್ರಸ್ತೆಯನ್ನು ಏಕೆ ಕೆಲಸ ಬಿಡುತ್ತಿದ್ದೀಯಾ ಎಂದು ಕೇಳಿದಾಗ, ಆಕೆ ಯಾವುದೇ ಕಾರಣ ನೀಡದೆ ನನಗೆ ಕೆಲಸ ಮಾಡಲು ಇಷ್ಟವಿಲ್ಲ ಎಂದಷ್ಟೆ ತಿಳಿಸಿದ್ದರು. ಆಗಲೇ ಆಕೆಯ ಮೇಲೆ ದೌರ್ಜನ್ಯ ನಡೆದಿರುವುದರ ಬಗ್ಗೆ ನಮಗೆ ಹೇಳಬಹುದಿತ್ತು. ಆಗ ನಮ್ಮ ಬಳಿ ಏನೂ ಹೇಳದೆ ಈಗ ಐದು ವರ್ಷದ ನಂತರ ದೂರು ನೀಡಿದ್ದಾರೆ. ಇದರ ಹಿಂದೆ ದುರುದ್ದೇಶ ಅಡಗಿದೆ” ಎಂದು ಆರೋಪಿಸುವ ಮೂಲಕ ರೇವಣ್ಣ ಕುಟುಂಬದ ಪರ ನಿಂತಿದ್ದಾರೆ.
“ಭವಾನಿ ಅಮ್ಮ ನಮ್ಮ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದ್ದಾರೆ. ಅವರು ನಮ್ಮ ಕುಟುಂಬದ ಜೊತೆ ಇದ್ದರು. ಹೆದರಿಸಿ ಇವರನ್ನ ಕರೆದುಕೊಂಡು ಹೋಗಿ ದೂರು ಕೊಡಿಸಿದ್ದಾರೆ. ಚುನಾವಣೆ ಸಮಯದಲ್ಲಿ ಗೌಡರ ಮನೆಗೆ ಕಪ್ಪು ಚುಕ್ಕೆ ತರಲು ಈ ಕೆಲಸ ಮಾಡಿದ್ದಾರೆ. ಇದೆಲ್ಲ ಸುಳ್ಳು ದೂರು. ರೇವಣ್ಣ ಕುಟುಂಬ ನಮಗೆ ಸಂಬಂಧಿಕರು” ಎಂದು ರೇವಣ್ಣ ಕುಟುಂಬದ ಪರ ಬ್ಯಾಟಿಂಗ್ ಮಾಡಿದ್ದಾರೆ.
“ದೇವೇಗೌಡ ಕುಟುಂಬಕ್ಕೆ ಕಪ್ಪುಚುಕ್ಕೆ ತರಲು ದೂರು ನೀಡಿದ್ದಾರೆ. ಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ಬರಬಾರದು. ಸಂತ್ರಸ್ತ ಮಹಿಳೆ ಸುಳ್ಳು ಹೇಳುತ್ತಿದ್ದಾರೆ. ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡುತ್ತೇವೆ. ಗೌಡರ ಕುಟುಂಬ ತಪ್ಪು ಮಾಡಿಲ್ಲ. ದೂರುದಾರರ ಸಂತ್ರಸ್ತ ಮಹಿಳೆಯ ನಡತೆಯೇ ಸರಿ ಇರಲಿಲ್ಲ. ಅವರಿಗೆ ಯಾವ ದೌರ್ಜನ್ಯ ಆಗಿಲ್ಲ” ಎಂದು ಸಂಬಂಧಿಕರು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ಪ್ರಕರಣ | ರೇವಣ್ಣ ಕುಟುಂಬವೇ ಬೇರೆ, ನನ್ನ ಕುಟುಂಬವೇ ಬೇರೆ: ಕುಮಾರಸ್ವಾಮಿ
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತೆಯ ಸಂಬಂಧಿಕರಾದ ಜಯಂತಿ, ಶಿಲ್ಪಾ, ವೇದಾ, ಜ್ಯೋತಿ, ಮಂಜುನಾಥ ಹಾಗೂ ಬಿ ಕೆ ಗೋಪಾಲ್ ಉಪಸ್ಥಿತರಿದ್ದರು.
