ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡಿರುವ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ನವೀನ್ ಗೌಡ ಸಹಿತ ಇಬ್ಬರನ್ನು ಇಂದು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದ ಮೇಲೆ ನವೀನ್ ಗೌಡ ಸಹಿತ ಚೇತನ್ ಎಂಬವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಇಬ್ಬರೂ ಹೈಕೋರ್ಟ್‌ಗೆ ಬಂದಿದ್ದ ವೇಳೆ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‌ಡ್ರೈವ್ ಹಂಚಿಕೆ ಆರೋಪ ಹೊತ್ತುಕೊಂಡಿರುವ ಈ ಇಬ್ಬರು ಆರೋಪಿಗಳು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್ ಕಡೆ ಬಂದಿದ್ದ ವೇಳೆಯೇ ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಲು ಸಿಐಡಿ ಕಚೇರಿಗೆ ಕರೆದೊಯ್ಯಲಾಗಿದೆ.
ಪೆನ್‌ಡ್ರೈವ್ ಹಂಚಿಕೆ ಆರೋಪದಲ್ಲಿ ಏ.23ರಂದು ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ 6 ಮತ್ತು 7ನೇ ಆರೋಪಿಗಳಾಗಿ ಇತ್ತೀಚೆಗೆ ಚೇತನ್ ಹಾಗೂ ಲಿಖಿತ್ ಬಂಧನವಾಗಿತ್ತು. ಇದೀಗ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣ ದಾಖಲಾದ ಮೇಲೆ ಕಾಂಗ್ರೆಸ್ ಕಾರ್ಯಕರ್ತರಾದ ನವೀನ್ ಗೌಡ, ಚೇತನ್ ಹಾಗೂ ಪುಟ್ಟಿ ಆಲಿಯಾಸ್ ಪುಟ್ಟರಾಜ್ ತಲೆಮರೆಸಿಕೊಂಡಿದ್ದರಿಂದ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರಾದರೂ, ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಅವರೇ ವಿಚಾರಣೆಗಾಗಿ ಕೋರ್ಟ್ ಬಳಿ ಬಂದಾಗ ಸಿಕ್ಕಿಬಿದ್ದಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್ ಕೆಜಿಗೆ ₹220
ಹಾಸನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಹಾಸನ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲು ಎಸ್ಐಟಿ ತಂಡ ಕರೆದೊಯ್ದಿದೆ. ನವೀನ್ ಗೌಡ ಹಾಗೂ ಚೇತನ್ ವಿರುದ್ಧ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಹಂಚಿಕೆ ಆರೋಪವಿತ್ತು. ಪ್ರಜ್ವಲ್ ರೇವಣ್ಣ ಆಪ್ತ ಪೂರ್ಣಚಂದ್ರ ತೇಜಸ್ವಿ ಎಂಬಾತ ಇವರ ವಿರುದ್ಧ ಏ.23ರಂದು ದೂರು ನೀಡಿದ್ದರು.
