ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯವನ್ನು ವಿಡಿಯೋ ಮಾಡಿಟ್ಟುಕೊಂಡು ವಿಕೃತಿ ಮರೆದಿದ್ದ ಲೈಂಗಿಕ ಹಗರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕಾಗಿ ಎಸ್ಐಟಿ ನಾನಾ ನೋಟೀಸ್ಗಳನ್ನು ಜಾರಿ ಮಾಡಿದೆ. ಆದರೆ, ವಿದೇಶಕ್ಕೆ ಪರಾರಿಯಾಗಿರುವ ಆತ, ಬೆಂಗಳೂರಿಗೆ ಮರಳಿಲ್ಲ. ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿದ್ದಾರೆ ಎನ್ನಲಾಗುತ್ತಿತ್ತು. ಇದೀಗ, ಆತ ರೈಲಿನ ಮೂಲಕ ಜರ್ಮನಿಯಿಂದ ಲಂಡನ್ಗೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಇಂಗ್ಲೆಂಡ್ನಲ್ಲಿರುವ ಭಾರತೀಯ ಮೂಲದ ಉದ್ಯಮಿಯೊಬ್ಬರ ಸಹಾಯದಿಂದ ಆರೋಪಿ ಪ್ರಜ್ವಲ್ ಮತ್ತು ಆತನ ಇಬ್ಬರು ಗೆಳೆಯರು ರೈಲಿನಲ್ಲಿ ಲಂಡನ್ಗೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಏಪ್ರಿಲ್ 26ರಂದು ಮತದಾನದ ಬಳಿಕ ಬೆಂಗಳೂರಿನಿಂದ ಪರಾರಿಯಾದ ಪ್ರಜ್ವಲ್ ಜರ್ಮನಿಗೆ ತೆರಳಿದ್ದಾರೆ ಎನ್ನಲಾಗಿತ್ತು. ಅಲ್ಲಿಂ ದುಬೈಗೆ ಹೋಗಿದ್ದಾರೆ ಎಂಬ ಮಾಹಿತಿ ಇತ್ತು. ದುಬೈನಿಂದ ಬೆಂಗಳೂರಿಗೆ ಬರುತ್ತಾರೆಂದು ಹೇಳಲಾಗಿತ್ತು. ಆದರೆ, ಆತ ವಿದೇಶಗಳಲ್ಲಿ ಕಣ್ಣಾಮುಚ್ಚಾಲೆ ಆಡವಾಗುತ್ತಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವವರೆಗೂ ಆತ ಭಾರತಕ್ಕೆ ಬರುವುದು ಸಂಶಯವಾಗಿದೆ.
ಆರೋಪಿ ಪ್ರಜ್ವಲ್ ಮೇ 03 ಮತ್ತು 15ರಂದು ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ, ಎರಡೂ ಬಾರಿಯೂ ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಮುಂದಿನ ಟಿಕೆಟ್ ಬುಕ್ಕಿಂಗ್ ಮೇಲೆ ಕಣ್ಣಿಟ್ಟಿದ್ದಾರೆ.