ಹಾಸನ ಸಂಸದ ಪ್ರಜ್ವಲ್ ರೇವಣ್ಣನದ್ದು ಎನ್ನಲಾದ ಲೈಂಗಿಕ ಹಗರಣ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೂ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ. ಆ ಸಂತ್ರಸ್ತ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಮಹಿಳೆಯ ಮಗ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಎಫ್‌ಐಆರ್ ದಾಖಲಿಸಿದ್ದಾರೆ. ಎಚ್.ಡಿ ರೇವಣ್ಣ ಅವರನ್ನು ಎ1 ಆರೋಪಿ ಮತ್ತು ಅವರ ಸಹಚರ ಸತೀಶ್ ಬಾಬಣ್ಣ ಎಂಬಾತನನ್ನು ಎ2 ಆರೋಪಿಯೆಂದು ಉಲ್ಲೇಖಿಸಿದ್ದಾರೆ. ಸತೀಶ್ ಬಾಬಣ್ಣ ಎಂಬಾತನ್ನು ಬಂಧಿಸಿದ್ದಾರೆ. ಆತನಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತನ್ನ ತಾಯಿಯನ್ನು ರೇವಣ್ಣ ಅಪಹರಿಸಿದ್ದಾರೆ ಎಂದು ಕೆ.ಆರ್ ನಗರ ಟೌನ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಪುತ್ರ ರಾಜು ಎಂಬವರು ದೂರು ನೀಡಿದ್ದಾರೆ. ದೂರಿನಲ್ಲಿ, “ಏಪ್ರಿಲ್ 29ರಂದು ತಮ್ಮ ಮನೆಗೆ ಬಂದಿದ್ದ ರೇವಣ್ಣ ಅವರ ಸಹಚರ ಸತೀಶ್ ಬಾಬಣ್ಣ ಎಂಬಾತ ‘ರೇವಣ್ಣ ಅವರು ನಿಮ್ಮನ್ನ ಬರಲು ಹೇಳಿದ್ದಾರೆಂದು’ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾನೆ. ಎಲ್ಲಿಗೆ ಕರೆದುಕೊಂಡು ಹೋದರು. ಆಕೆಯನ್ನು ಕರೆದೊಯ್ದ ನಂತರವಷ್ಟೇ, ಆಕೆಯ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿರುವುದು ನಮಗೆ ತಿಳಿಯಿತು” ಎಂದು ವಿವರಿಸಿದ್ದಾರೆ.