ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಲೈಂಗಿಕ ಹಗರಣದಲ್ಲಿ ಬಂಧಿತನಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿ 3ನೇ ಚಾರ್ಜ್‌ಶೀಟ್‌ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಹಾಸನ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಮೇಲೆ ಮೂರು ವರ್ಷಗಳ ಕಾಲ ನಿರಂತರವಾಗಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಿದೆ.
ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 1691 ಪುಟಗಳ ಚಾರ್ಜ್‌ಶೀಟ್‌ಅನ್ನು ಶುಕ್ರವಾರ ಸಲ್ಲಿಸಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆಗೆ ಆಕೆಯ ಗಂಡನನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸಿ, ಆಕೆಯ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದೆ.
ಹಾಸನದ ರೇಸ್‌ಕೋರ್ಸ್ ರಸ್ತೆಯಲ್ಲಿ ಅತಿಥಿ ಗೃಹಕ್ಕೆ ಸಂತ್ರಸ್ತೆಯನ್ನು ಕರೆಸಿಕೊಂಡಿದ್ದ ಪ್ರಜ್ವಲ್, ಆಕೆಗೆ ಗನ್ ತೋರಿಸಿ, ಗಂಡನನ್ನು ಕೊಲ್ಲುವುದಾಗಿ ಬೆದರಿಸಿ, ಅತ್ಯಾಚಾರ ಎಸಗಿದ್ದಾನೆ. ಆ ನಂತರ, 2020ರಿಂದ 2023ರವರೆಗೆ ಹಲವಾರು ಬಾರಿ ತನ್ನ ನಿವಾಸಕ್ಕೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಆಗ್ಗಾಗ್ಗೆ ವಿಡಿಯೋ ಕಾಲ್ ಮಾಡಿಯೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಎಸ್‌ಐಟಿ ವಿವರಿಸಿದೆ.
ಅತ್ಯಾಚಾರದ ವೇಳೆ ಸಂತ್ರಸ್ತೆಗೆ ಅಳಬಾರದು, ನಗಬೇಕು ಎಂದು ಹಾಗೂ ತಾನು ಹೇಳಿದ ಉಡುಗೆಗಳನ್ನು ಧರಿಸಿಕೊಳ್ಳುವಂತೆ ಪೀಡಿಸಿ ವಿಕೃತಿ ಮೆರೆದಿದ್ದಾನೆ. ತನ್ನ ಕೃತ್ಯಗಳನ್ನು ತಾನೇ ವಿಡಿಯೋ ಮಾಡಿಕೊಡಿದ್ದಾನೆ. ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ, ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ. ಆತನ ವಿರುದ್ಧದ ಆರೋಪ ದೃಢಪಟ್ಟಿದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ತಿಳಿಸಿದೆ.