ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಪ್ರಜ್ವಲ್ ರೇವಣ್ಣನ ತಾಯಿ, ಮತ್ತೋರ್ವ ಆರೋಪಿ ಮಾಜಿ ಸಚಿವ ರೇವಣ್ಣನ ಪತ್ನಿ ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ಅವರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಭವಾನಿಗೆ ನೋಟಿಸ್ ಜಾರಿ ಮಾಡಿದೆ. ಪ್ರತಿಕ್ರಿಯೆ ಕೇಳಿದೆ.
“ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಲು ಭವಾನಿ ನಿರ್ದೇಶನ ನೀಡಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ಈ ಹೇಳಿಕೆ ದಾಖಲಾಗಿದೆ. ಆಕೆಯನ್ನು ಆರೋಪ ಮುಕ್ತವೆಂದು ಹೇಳಲಾಗದು. ಆಕೆಗೆ ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಆದರೆ, ನ್ಯಾಯಾಲಯ ಯಾಕೆ ಜಾಮೀನು ತಿರಸ್ಕರಿಸಿತು ಎಂಬುದನ್ನು ಹೈಕೋರ್ಟ್ ಪರಿಗಣಿಸದೆ, ಜಾಮೀನು ನೀಡಿದೆ” ಎಂದು ಸಿಬಲ್ ವಾದಿಸಿದ್ದಾರೆ.
ವಾದ ಆಲಿಸಿದ ಸುಪ್ರೀಂಕೋರ್ಟ್, ಭವಾನಿ ರೇವಣ್ಣಗೆ ನೋಟಿಸ್ ಜಾರಿ ಮಾಡಿದೆ.