ಇಡೀ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಟಾರ್ಗೆಟ್ ಆದರಾ? ಅಥವಾ ರೇವಣ್ಣ ಗುರಿಯಾದರಾ ಎಂಬ ಪ್ರಶ್ನೆಗೆ ಕಾಲ ಬಂದಾಗ ಉತ್ತರಿಸುವೆ. ಆಗ ಎಳೆಎಳೆಯಾಗಿ ಬಿಚ್ಚಿಡಲಿದ್ದೇನೆ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಮಗೆ ಸದ್ಯದ ಮಟ್ಟಿಗೆ ದೇವರೇ ಗತಿ. ಅದನ್ನು ಬಿಟ್ಟರೆ ನ್ಯಾಯಾಂಗವೇ ಕಾಪಾಡಬೇಕು. ನನ್ನ ಮೇಲಿನ ಆರೋಪಗಳಿಂದ ಮುಕ್ತನಾಗಿ ಹೊರಬರುವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಶ್ಲೀಲ ವಿಡಿಯೋ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣರನ್ನು ನೋಡಲು ಜೈಲಿಗೆ ಹೋಗುವುದಿಲ್ಲ ಎಂಬುದನ್ನು ಇದೇ ವೇಳೆ ಸ್ಪಷ್ಟಪಡಿಸಿದರು.
ಭವಾನಿ ರೇವಣ್ಣ ಮಗನನ್ನು ನೋಡಲು ಹೋಗಿರುವುದರ ಬಗ್ಗೆ ಪ್ರತಿಕ್ರಿಯಿಸಿ,”ತಾಯಿಯಾಗಿ ಮಗನನ್ನು ನೋಡಲು ಹೋಗಿರುತ್ತಾರೆ. ಅವರು ಏನೇನು ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಹಾಗೆಂದು ನಾನೀಗ ಪ್ರಜ್ವಲ್ ಭೇಟಿಯಾಗಲು ಹೋಗುವುದಿಲ್ಲ. ಒಂದು ವೇಳೆ ಹೋದರೆ, ಅವನು ಏನೋ ಹೇಳಿಕೊಡಲು ಹೋಗಿದ್ದಾನೆ ಎನ್ನುತ್ತಾರೆ” ಎಂದು ಹೇಳಿದರು.
“ನಮ್ಮ ಕುಟುಂಬದ ಮೇಲೆ ಹಾಕಿರುವ ಕೇಸ್ಗಳು ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಪ್ರಕರಣಗಳು ಕೋರ್ಟ್ನಲ್ಲಿ ಇರುವುದರಿಂದ ನಾನು ಹೆಚ್ಚಿಗೆ ಮಾತಾಡಲ್ಲ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ” ಎಂದರು.
