ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಕೊಲೆಯಾದಾಗ, ಶಿವಮೊಗ್ಗದಲ್ಲಿ ಹರ್ಷ ಹತ್ಯೆಯಾದಾಗ ಕೊಲೆಗಡುಕರು ಇರುವ ಜಾಗ ಗೊತ್ತಾಗಿತ್ತು. ಪೋಲೀಸರ ಕೈಯಲ್ಲಿ ಬಂದೂಕ ಇತ್ತು. ಪೊಲೀಸರ ಎದೆಯಲ್ಲಿ ಗುಂಡಿಗೆಯೂ ಇತ್ತು. ಆರೋಪಗಳ ಎದೆಗೆ ಗುಂಡಿಟ್ಟು ಎನ್‌ಕೌಂಟರ್ ಮಾಡಬಹುದಿತ್ತು. ಆದರೆ, ಟ್ರಿಗರ್ ಎಳೆಯುವಂತೆ ಆದೇಶ ನೀಡಲು ಬಿಜೆಪಿ ಸರ್ಕಾರವನ್ನು ತಡೆದವರಾರು? ಹಾಗಾಗಿಯೇ ಕರ್ನಾಟಕಕ್ಕೂ ಒಬ್ಬ ಯೋಗಿ ಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ವಿಶ್ವಹಿಂದು ಪರಿಷದ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂಥಹ ನಾಯಕತ್ವ ಬೇಕಾಗಿದೆ. ಅಂತಹ ನಾಯಕತ್ವವನ್ನು ಹಿಂದೂ ಸಂಘಟನೆಗಳು ಸೃಷ್ಠಿಸಬೇಕು” ಎಂದು ಹೇಳಿದ್ದಾರೆ.
“ವಿಚಾರ, ಧರ್ಮಕ್ಕೆ ನಿಷ್ಠೆ ಇರುವ ಎದೆಗಾರಿಕೆ ಇರುವ ನಾಯಕತ್ವ ಬಿಜೆಪಿಗೆ ಬೇಕು. ಅಲ್ಲದೇ ಧರ್ಮದ ಬಗ್ಗೆ ಪ್ರೀತಿ, ಅಭಿಮಾನ ಇದೆಯೇ ಎಂಬುದನ್ನು ನಾವು ಆತ್ಮ ವಿಮರ್ಶೆ ಮಾಡಿಬೇಕು. ಧರ್ಮದ ಬಗೆಗಿನ ಆಭಿಮಾನ ಶೂನ್ಯತೆಯಿಂದ ಹೊರ ಬರಬೇಕು. ವಸುದೈವ ಕುಟುಂಬಕಂ ಎಂದು ಹಿಂದೂ ಸಮಾಜ ಶಾಂತಿ ಮತ್ತು ಸದ್ಭಾವನೆಯನ್ನು ಸದಾ ಬೋಧಿಸಿದೆ. ಜಗತ್ತಿನಲ್ಲಿ ಶಾಂತಿ, ಸದ್ಭಾವನೆ ನೆಲೆಯಾಗಲು ಎಲ್ಲರೂ ಅದನ್ನು ಪಾಲಿಸಬೇಕು” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
“ಖಗೋಳ ವಿಜ್ಞಾನದ ಬಗ್ಗೆ, ಗೃಹಗಳ ಬಗ್ಗೆ, ಸೂರ್ಯನ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆ ಹಿಂದೂ ಧರ್ಮ ತಿಳಿಸಿದೆ. ನಮ್ಮ ಧರ್ಮ, ಸಂಸ್ಕೃತಿ ಯ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸುವ ಮನಸ್ಸು ಮಾಡಬೇಕು. ನಾವು ಒಟ್ಟಾಗಿದ್ದರೆ ಮಾತ್ರ ನಮ್ಮ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ. ವೈವಿಧ್ಯತೆಯಲ್ಲಿ ಏಕತೆ ಇರುವುದು ಹಿಂದೂ ಸಮಾಜದಲ್ಲಿ ಮಾತ್ರ” ಎಂದು ಬಿಜೆಪಿಯ ಹಿಂದುತ್ವ ಕೋಮುವಾದಿ ಸಿದ್ದಾಂತವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಕಾಮುಕರನ್ನು ಸಾಕುತ್ತಿದೆ ಬಿಜೆಪಿ; ಇನ್ನೆಲ್ಲಿ ಮಹಿಳೆಯರ ರಕ್ಷಣೆ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿರುವ ಪ್ರತಾಪ್ ಸಿಂಹ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಈ ಹಿಂದೆ, ನೆಪೋಟಿಸಂ (ಕುಟುಂಬ ರಾಜಕಾರಣ) ಬಗ್ಗೆ ಮಾತನಾಡಿದ್ದ ಪ್ರತಾಪ್ ಸಿಂಹ, ”ಯಡಿಯೂರಪ್ಪ, ಖರ್ಗೆ, ಕುಮಾರಣ್ಣ, ದೇವೇಗೌಡ ಎಲ್ಲರಿಗೂ ತಮ್ಮ ಮಕ್ಕಳ ಬಗ್ಗೆಯೇ ಚಿಂತಿಸಿದರೆ, ಕಂಡವರ ಮಕ್ಕಳನ್ನು ಬೆಳೆಸುವವರಾರು? ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸ್ ದೇವರಾದರು. ಈಗಿನ ನಾಯಕರು ತಮ್ಮ ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ, ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.