ಸಂಸದ ಪ್ರತಾಪ್ ಸಿಂಹ ಅವರು ಕೆಲವರಿಂದ ಹಣ ವಸೂಲಿ ಮಾಡಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ ಕಾಮಗಾರಿಯಲ್ಲಿ ಕಮಿಷನ್ ಪಡೆದಿದ್ದಾರೆ. ಆ ಹಣವನ್ನ ಕೊಡಗು ನ್ಯೂಟ್ರಿಷಿಯನ್ ಎಂಬ ಕಂಪನಿಯಲ್ಲಿ ಬೇನಾಮಿ ಹೆಸರಿನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮೈಸೂರು ವಿಶ್ವವಿದ್ಯಾನಿಲಯದ ಒಬ್ಬರು ಸಿಂಡಿಕೇಟ್ ಸದಸ್ಯರಿಂದ ಪ್ರತಾಪ್ ಸಿಂಹ ಹಣ ವಸೂಲಿ ಮಾಡಿದ್ದಾರೆ. ಅಲ್ಲದೆ, ಎಕ್ಸ್‌ಪ್ರೆಸ್-ವೇ ಕಾಮಕಾರಿಯಲ್ಲೂ ಕಮಿಷನ್ ಪಡೆದಿದ್ದಾರೆ. ಆ ಹಣದಲ್ಲಿ ಸುಮಾರು 50– 60 ಕೋಟಿ ರೂ. ಹಣವನ್ನು ಕೊಡಗು ನ್ಯೂಟ್ರಿಷಿಯನ್‌ನಲ್ಲಿ ಹೂಡಿಕೆ ಮಾಡಿದ್ದಾರೆ” ಎಂದು ದೂರಿದ್ದಾರೆ.
“ಜೊತೆಗೆ, ಕಂಪನಿಗೆ ಹೂಡಿಕೆ ಮಾಡಿರುವ ಹಣದಲ್ಲಿ ಕೆಲವು ಅಧಿಕಾರಿಗಳೂ ಪಾಲು ಹೊಂದಿದ್ದಾರೆ. ಈ ಬಗ್ಗೆ ಐಟಿ ಹಾಗೂ ಇಡಿಗೆ ದೂರು ನೀಡುತ್ತೇನೆ. ತನಿಖೆಗೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪತ್ರ ಬರೆಯುತ್ತೇನೆ’’ ಎಂದು ಅವರು ಹೇಳಿದ್ದಾರೆ.