ಮಣಿಪುರದ ಶಿರುಯಿ ಲಿಲಿ ಉತ್ಸವದ ವರದಿ ಮಾಡಲು ಉಖ್ರುಲ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಾಧ್ಯಮ ತಂಡವನ್ನು ಮಾರ್ಗಮಧ್ಯೆ ಭದ್ರತಾ ಸಿಬ್ಬಂದಿಗಳು ತಡೆದು ವಾಹನದಲ್ಲಿದ್ದ ‘ಮಣಿಪುರ ರಾಜ್ಯ ಸಾರಿಗೆ’ ಎಂಬ ಫಲಕವನ್ನು ಮರೆಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲಲ್ಲಿ ಪ್ರತಿಭಟನೆ ನಡೆಯುತ್ತಿದೆ. ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಿಸುತ್ತಿದೆ.
ಈ ನಡುವೆ, “ರಾಜ್ಯದಲ್ಲಿ ಶಾಂತಿ ಕಾಪಾಡುವಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಫಲವಾಗಿದೆ” ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೀಶಮ್ ಮೇಘಚಂದ್ರ ಆರೋಪಿಸಿದ್ದಾರೆ. ಹಾಗೆಯೇ ಈ ವರ್ಷದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ರಾಜ್ಯಪಾಲರ ಮಹತ್ವದ ನಡೆ; ಶಾಂತಿ ಮರುಸ್ಥಾಪನೆ ಸುಲಭವೇ?
2023ರ ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದ್ದು 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ದೀರ್ಘಕಾಲದ ಹಿಂಸಾಚಾರ ನಿಯಂತ್ರಿಸುವ ಬಿಜೆಪಿ ಸರ್ಕಾರ ವಿಫಲವಾಗುತ್ತಿದ್ದಂತೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ರಾಜೀನಾಮೆ ನೀಡಿದರು.
ಅದಾದ ಬಳಿಕ ಈ ವರ್ಷದ(2025) ಫೆಬ್ರವರಿ 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಕೇಂದ್ರ ಸರ್ಕಾರವು ಹೇರಿದೆ. 2027ರವರೆಗೆ ಅಧಿಕಾರಾವಧಿಯನ್ನು ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ. ಆದರೆ ಇಂದಿಗೂ ಹಿಂಸಾಚಾರ ಸಂಪೂರ್ಣವಾಗಿ ನಿಂತಿಲ್ಲ. ಅಲ್ಲಲ್ಲಿ ಹಿಂಸಾಚಾರಗಳು ನಡೆಯುತ್ತಲೇ ಇವೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌ನ ನಾಯಕ, ವಾಂಗ್ಖೇಮ್ ಶಾಸಕ ಮೇಘಚಂದ್ರ, “ಡಬಲ್-ಎಂಜಿನ್ ಸರ್ಕಾರವು ಕಳೆದ 2 ವರ್ಷಗಳಿಗೂ ಹೆಚ್ಚು ಕಾಲ ಮಣಿಪುರದಲ್ಲಿ ವಿಫಲವಾಗಿದೆ. ರಾಷ್ಟ್ರಪತಿ ಆಳ್ವಿಕೆಯೂ ಮಣಿಪುರದಲ್ಲಿ ವಿಫಲಗೊಂಡಿದೆ” ಎಂದು ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮಣಿಪುರವನ್ನು ಪದೇ ಪದೇ ವಿಫಲಗೊಳಿಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ಮಣಿಪುರ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಮಣಿಪುರ ರಾಜ್ಯ ಸಾರಿಗೆ ಫಲಕ ಮುಚ್ಚಲು ಹೇಳಿದ ಘಟನೆಯನ್ನು ಉಲ್ಲೇಖಿಸಿರುವ ಮೇಘಚಂದ್ರ, “ಮಣಿಪುರ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ನಿಂದ ‘ಮಣಿಪುರ’ ಪದವನ್ನು ತೆಗೆದುಹಾಕಲು ಮಣಿಪುರ ರಾಜ್ಯಪಾಲರಿಗೆ ಯಾರು ಸೂಚನೆ ನೀಡಿದರು” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಟಿವಿ ಕಾರ್ಯಕ್ರಮದಲ್ಲಿ ಮಣಿಪುರ ರಾಜಕೀಯದ ಬಗ್ಗೆ ಮಾತನಾಡಿದ ಹಿರಿಯ ಪತ್ರಕರ್ತನ ಅಪಹರಣ
ಇನ್ನು ಮೇ 20ರಂದು ‘ಮಣಿಪುರ ರಾಜ್ಯ ಸಾರಿಗೆ’ ಎಂಬ ಫಲಕವನ್ನು ಮರೆಮಾಡಲು ಸೂಚಿಸಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಕ್ಷಮೆಯಾಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ತೀವ್ರ ಪ್ರತಿಭಟನೆಯ ಕಾರಣದಿಂದಾಗಿ ರಾಜಭವನದಿಂದ ಸುಮಾರು 300 ಮೀಟರ್ ದೂರದಲ್ಲಿರುವ ಕಾಂಗ್ಲಾ ಕೋಟೆಯನ್ನು ತಲುಪಲು ಸೇನಾ ಹೆಲಿಕಾಪ್ಟರ್ ಬಳಿಸಿದ್ದಾರೆ.
Manipur Governor had to take a helicopter to fly from Imphal International Airport in order to reach Raj Bhavan, which is around 7 km by road travel from the airport, today.
— Keisham Meghachandra Singh (@meghachandra_k) May 26, 2025
Who instructed Manipur Governor to remove the word 'Manipur' from the Manipur State Transport Corporation… pic.twitter.com/flcQyjNxdF
ಈ ಬಗ್ಗೆಯೂ ಕಾಂಗ್ರೆಸ್ ನಾಯಕ ಮೇಘಚಂದ್ರ ಪೋಸ್ಟ್ ಮಾಡಿದ್ದಾರೆ. “ಇಂದು(ಮೇ 26) ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಸುಮಾರು 7 ಕಿ.ಮೀ ದೂರದಲ್ಲಿರುವ ರಾಜಭವನವನ್ನು ತಲುಪಲು ಮಣಿಪುರ ರಾಜ್ಯಪಾಲರು ಇಂಫಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಹಾರಬೇಕಾಯಿತು” ಎಂದಿದ್ದಾರೆ.
2023ರ ಮೇ ತಿಂಗಳಿನಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
