ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಕಾಂಗ್ರೆಸ್ ಸರ್ಕಾರ ಕಾನೂನು ಹಾಳುಗೆಡವಿದೆ. ಆದ್ದರಿಂದ ರಾಷ್ಟ್ರಪತಿ ಆಡಳಿತ ತರಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಬಿಜೆಪಿ-ಜೆಡಿಎಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಆದರೆ ಅವರು ಕಲ್ಲು ಹೊಡೆಯಿರಿ, ಟಯರ್ ಸುಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ” ಎಂದರು.
“ಬಿಜೆಪಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದೆ. ಈ ಸರ್ಕಾರವೇ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್ ನಾಯಕರು, ತಮ್ಮವರು ಪ್ರತಿಭಟನೆ ಮಾಡುತ್ತಾರೆ, ನೀವು ಸಹಕಾರ ನೀಡಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಪೊಲೀಸರ ಕೈ ಕಟ್ಟಿ ಹಾಕಿ ಕಾನೂನು ಸುವ್ಯವಸ್ಥೆ ಹಾಳುಗೆಡವಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.
“ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಅಕ್ರಮ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ವತಃ ಲೂಟಿಕೋರರಾಗಿದ್ದು, ಅವರು ಅಧಿಕಾರದಿಂದ ಕೆಳಕ್ಕಿಳಿಯಬೇಕೆಂದು ಜನರು ಹೇಳುತ್ತಿದ್ದಾರೆ. ಮುಖ್ಯಮಂತ್ರಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸದಿದ್ದರೂ ಅವರು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಕಳ್ಳತನ ಮಾಡಿದ್ದಾರೆ, ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಮುಖ್ಯಮಂತ್ರಿಯವರು ಶಾಸಕಾಂಗ ಪಕ್ಷದ ಬೆಂಬಲವನ್ನು ತೋರಿಸುತ್ತಿದ್ದಾರೆ. ಇದರಿಂದ ಏನು ಪ್ರಯೋಜನ” ಎಂದು ಪ್ರಶ್ನೆ ಮಾಡಿದರು.
“ವಿಧಾನಸಭೆಯಲ್ಲಿ ಮುಡಾ ಹಗರಣ ಕುರಿತು ಬಿಜೆಪಿ ಚರ್ಚಿಸಲು ಮುಂದಾದಾಗ ಸಿಎಂ ಸಿದ್ದರಾಮಯ್ಯ ಪಲಾಯನ ಮಾಡಿದ್ದಾರೆ. ಅಲ್ಲಿ 224 ಶಾಸಕರು, ಮಾಧ್ಯಮಗಳು, ಅಧಿಕಾರಿಗಳಿದ್ದರೂ, ಉತ್ತರ ನೀಡಲಿಲ್ಲ. ವಿರೋಧ ಪಕ್ಷವಾಗಿ ಕರ್ತವ್ಯದಂತೆ ಬಿಜೆಪಿ ಪಾದಯಾತ್ರೆ ಮಾಡಿದೆ. ಆದರೆ ಸರ್ಕಾರದ ಅಧಿಕಾರ ಬಳಸಿಕೊಂಡು ಕಾಂಗ್ರೆಸ್ ಸಮಾವೇಶ ಮಾಡಿದೆ. ಇದನ್ನು ಸರ್ಕಾರ ಎನ್ನುತ್ತಾರೆಯೇ?” ಎಂದು ಕೇಳಿದರು.
“ಕಾಂಗ್ರೆಸ್ ಸರ್ಕಾರದ ಹಗರಣದ ಕುರಿತು ಬಿಜೆಪಿ, ಜೆಡಿಎಸ್ ಮಾತ್ರ ಪ್ರತಿಭಟಿಸುತ್ತಿಲ್ಲ. ಮಾಧ್ಯಮಗಳು ನಮಗಿಂತ ಮೊದಲೇ ಹಗರಣದ ತನಿಖೆಯ ಸುದ್ದಿಗಳನ್ನು ಪ್ರಕಟ ಮಾಡಿವೆ. ಜನರಿಗೂ ಈಗ ಸರ್ಕಾರದ ಮೇಲೆ ಅನುಮಾನ ಬಂದಿದೆ. ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಟಿ.ಜೆ.ಅಬ್ರಹಾಂ ಕೋರಿದ್ದಾರೆಯೇ ಹೊರತು ಬಿಜೆಪಿ ಕಾರ್ಯಕರ್ತರು ಕೋರಿಕೆ ಸಲ್ಲಿಸಿಲ್ಲ. ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರಾಜ್ಯಪಾಲರು ತನಿಖೆಗೆ ಅವಕಾಶ ನೀಡಿದ್ದಾರೆಯೇ ಹೊರತು ಸರ್ಕಾರ ವಜಾ ಮಾಡಿಲ್ಲ” ಎಂದರು.
“ಬಿ.ಎಸ್.ಯಡಿಯೂರಪ್ಪ, ಎಲ್.ಕೆ.ಅಡ್ವಾಣಿ, ರಾಮಕೃಷ್ಣ ಹೆಗಡೆ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ಪಡೆಯಲಾಗಿತ್ತು. ಸಚಿವ ಬಿ.ನಾಗೇಂದ್ರ ಅವರ ತಪ್ಪು ಇಲ್ಲವಾದರೆ ರಾಜೀನಾಮೆ ಕೊಟ್ಟಿದ್ದು ಏಕೆ? ದಲಿತರಾದರೆ ರಾಜೀನಾಮೆ ಕೊಡಬೇಕು. ಆದರೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ಕೊಡಬಾರದು ಎಂದರೆ ಹೇಗೆ? 5 ಲಕ್ಷ ರೂ.ಗೆ ಜಮೀನು ಪಡೆದು 62 ಕೋಟಿ ರೂ. ಕೇಳುವ ಯೋಜನೆ ರಾಜ್ಯದಲ್ಲಿದ್ದರೆ ಎಲ್ಲರಿಗೂ ತಿಳಿಸಲಿ. ಇಂತಹ ಲೂಟಿಕೋರರಿಗೆ ಶಿಕ್ಷೆಯಾಗಬೇಕು” ಎಂದು ಹೇಳಿದರು.
“ರಾಜ್ಯಪಾಲರ ಚಿತ್ರ ಸುಡುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಕಳೆದ ವರ್ಷ ಮಾಡಿದ ಪ್ರತಿಭಟನೆಗೆ ಈಗ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ದ್ವೇಷ ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರು ಎಷ್ಟು ದಿನ ಅಧಿಕಾರದಲ್ಲಿರುತ್ತಾರೆ? ಅನ್ಯಾಯದ ವಿರುದ್ಧ, ಜನರ ಪರವಾಗಿ ಹೋರಾಡುವ ಹಕ್ಕು ವಿರೋಧ ಪಕ್ಷದಲ್ಲಿರುವ ಎಲ್ಲ ಶಾಸಕರಿಗೂ ಇದೆ. ಬಿಜೆಪಿ ಕೂಡ ಕಾನೂನು ಪ್ರಕಾರ ಮುಂದೆ ಹೆಜ್ಜೆ ಇಡಲಿದೆ” ಎಂದರು.
BJP is corrupt political party without giving respect to Indian constitution, national flag and Indian national anthem. Majority of BJP members of legislatures have FIRs , corruption charges not being highlighted. They should be disqualified first.