- ಪ್ರಧಾನಿ ನರೇಂದ್ರ ಮೋದಿ ವಾರಂಗಲ್‌ನಲ್ಲಿ ಭದ್ರಕಾಳಿ ದೇವಾಲಯಕ್ಕೆ ಭೇಟಿ
- ಪ್ರಧಾನಿ ಮೋದಿ ನಾನಾ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ಕೆ ಕೆಸಿಆರ್ ಗೈರು
ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣದಲ್ಲಿ ಸುಮಾರು ₹6,100 ಕೋಟಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಶನಿವಾರ (ಜುಲೈ 8) ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಹೈದರಾಬಾದ್‌ಗೆ ಶನಿವಾರ ಬೆಳಗ್ಗೆ ಬಂದಿಳಿದ ಪ್ರಧಾನಿ ಮೋದಿ, ವಾರಂಗಲ್‌ನಲ್ಲಿ ಭದ್ರಕಾಳಿ ದೇವಿ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡರು.
ಕೇಂದ್ರದಿಂದ ಚಾಲನೆ ನೀಡಲಾಗಿರುವ ಈ ಯೋಜನೆಗಳಿಂದ ತೆಲಂಗಾಣದ ಉದ್ಯಮ, ಪ್ರವಾಸೋದ್ಯಮಕ್ಕೆ ಅನುಕೂಲವಾಗುವುದರ ಜತೆಗೆ ಇಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಲು ಸಹಾಯಕವಾಗಿದೆ ಎಂದ ಪ್ರಧಾನಿ ಮೋದಿ, ಈ ಯೋಜನೆಗಳಿಂದ ತೆಲಂಗಾಣ ಎಲ್ಲ ಆರ್ಥಿಕತೆಗಳನ್ನು ಸಂಪರ್ಕಿಸುವ ಕೇಂದ್ರವಾಗಲಿದೆ ಎಂದು ಹೇಳಿದರು.
“ಇಂದು ಇಡೀ ಜಗತ್ತೇ ಭಾರತದಲ್ಲಿ ಹೂಡಿಕೆ ಮಾಡಲು ಮುಂದಡಿ ಇಡುತ್ತಿದೆ” ಎಂದು ಪ್ರಧಾನಿ ಮೋದಿ ಸಾರ್ವಜನಿಕ ಸಮಾವೇಶದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮತ್ತು ಬಿಜೆಪಿ ತೆಲಂಗಾಣ ಘಟಕದ ನೂತನ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ನಾನಾ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಗೈರಾಗಿದ್ದರು. ಇದಕ್ಕಾಗಿ ಪ್ರಧಾನಿ ಮೋದಿ ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬ್ರೇಕಿಂಗ್ ನ್ಯೂಸ್ | ಒಡಿಶಾ ರೈಲು ಅಪಘಾತ ; ಸಿಬಿಐನಿಂದ ಮೂವರು ರೈಲ್ವೆ ಅಧಿಕಾರಿಗಳ ಬಂಧನ
“ತೆಲಂಗಾಣದಲ್ಲಿ ಲಂಚವಿಲ್ಲದೆ ಯಾವುದೇ ಯೋಜನೆಗಳಿಲ್ಲ. ರಾಜ್ಯವು ಭ್ರಷ್ಟಾಚಾರದತ್ತ ತಳ್ಳಲ್ಪಟ್ಟಿದೆ” ಎಂದು ಪ್ರಧಾನಿ ಮೋದಿ ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ತೆಲಂಗಾಣದಲ್ಲಿ 2024ರ ವೇಳೆ ₹72 ಲಕ್ಷ ಕೋಟಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ತೆಲಂಗಾಣದಿಂದ ರಾಜಸ್ಥಾನದ ಬಿಕಾನೆರ್‌ಗೆ ತೆರಳಿ ₹24,300 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದರು.