ಮುಂದಿನ ಸರ್ಕಾರ ರಚಿಸಲು ‘ಇಂಡಿಯಾ’ ಮೈತ್ರಿಕೂಟಕ್ಕೆ ಸ್ಪಷ್ಟ ಮತ್ತು ನಿರ್ಣಾಯಕ ಜನಾದೇಶ ದೊರೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಚಂಡೀಗಢದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “20 ವರ್ಷಗಳ ನಂತರ ಇತಿಹಾಸ ಮರುಕಳಿಸುತ್ತಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. 2004 ಚುನಾವಣಾ ಫಲಿತಾಂಶ 2024ರಲ್ಲಿ ಪುನರಾವರ್ತನೆಯಾಗುತ್ತದೆ” ಎಂದಿದ್ದಾರೆ.
‘ಇಂಡಿಯಾ’ ಮೈತ್ರಿಕೂಟಕ್ಕೆ ಐದು ವರ್ಷಗಳಲ್ಲಿ ಐದು ಪ್ರಧಾನಿಗಳು ಎಂಬ ಪ್ರಧಾನಿ ಮೋದಿಯವರ ಟೀಕೆಗೆ ತಿರುಗೇಟು ನೀಡಿದ ರಮೇಶ್, “ಜೂನ್ 4ರಂದು ಚುನಾವಣೆಯ ಫಲಿತಾಂಶ ಪ್ರಕಟವಾದ ಮೂರು ದಿನಗಳಲ್ಲಿ ಪ್ರಧಾನಿ ಹೆಸರನ್ನು ಇಂಡಿಯಾ ಕೂಟವು ಪ್ರಕಟಿಸಲಿದೆ. ಐದು ವರ್ಷಗಳ ಕಾಲ ಒಬ್ಬ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡುತ್ತದೆ” ಎಂದು ಹೇಳಿದ್ದಾರೆ.
“’ಭಾರತ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಯಾರು ಎಂಬ ಪ್ರಶ್ನೆಯನ್ನು ಪದೇ ಪದೇ ಎತ್ತುತ್ತಿರುವವರಿಗೆ ನಾನು ತಿಳಿ ಹೇಳಬಯಸುತ್ತೇನೆ… 2004ರಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಹುಮತ ಪಡೆದಾಗ, ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಕೇವಲ ಮೂರು ದಿನಗಳಲ್ಲಿ ಯುಪಿಎ ಘೋಷಿಸಿತ್ತು” ಎಂದಿದ್ದಾರೆ.
“ಈ ಬಾರಿ, ಪ್ರಧಾನಿ ಹೆಸರು ಘೋಷಣೆಗೆ ಮೂರು ದಿನಗಳನ್ನೂ ತೆಗೆದುಕೊಳ್ಳುವುದಿಲ್ಲ. ಸರ್ಕಾರವನ್ನು ನಡೆಸಲು ಒಬ್ಬನೇ ನಾಯಕ ಐದು ವರ್ಷಗಳ ಕಾಲ ಪ್ರಧಾನಿಯಾಗುತ್ತಾರೆ. ಪ್ರಧಾನ ಮಂತ್ರಿ ಯಾರೆಂಬುದನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ‘ಇಂಡಿಯಾ’ ಕೂಟದ ಸದಸ್ಯರು ಆಯ್ಕೆ ಮಾಡುತ್ತಾರೆ” ಎಂದು ಅವರು ಹೇಳಿದ್ದಾರೆ.
“ನಮ್ಮ ದೇಶದ ಚುನಾವಣೆಗಳು ಸೌಂದರ್ಯ ಸ್ಪರ್ಧೆಯಲ್ಲ. ಇಲ್ಲಿ ಪಕ್ಷಗಳ ನಡುವೆ ಚುನಾವಣೆ ನಡೆಯುತ್ತದೆ. ನಮ್ಮ ಪ್ರಜಾಪ್ರಭುತ್ವವು ಪಕ್ಷ ಕೇಂದ್ರಿತವಾಗಿದೆಯೇ ಹೊರತು ವ್ಯಕ್ತಿ ಕೇಂದ್ರಿತವಲ್ಲ” ಎಂದು ರಮೇಶ್ ಹೇಳಿದ್ದಾರೆ.
“ಚುನಾವಣೆಯಲ್ಲಿ ಕಾಂಗ್ರೆಸ್ ಹೋರಾಟ ಪ್ರಬಲವಾಗಿದೆ. ಪರಿಣಾಮ, ಏಪ್ರಿಲ್ 19ರಿಂದ ಮೋದಿಯವರ ಭಾಷೆ ಬದಲಾಯಿತು. ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಕೋಮುವಾದಿ ತಂತ್ರ ಬಳಸಲಾರಂಭಿಸಿದರು. ಎಲ್ಲವನ್ನೂ ಹಿಂದೂ-ಮುಸ್ಲಿಂ ಸಮಸ್ಯೆಯಾಗಿ ಪರಿವರ್ತಿಸಿದರು. ಮೋದಿ ಅವರು ಈಗ ‘ವೀಕ್ಷಿತ್ ಭಾರತ್, ಮೋದಿ ಕಿ ಗ್ಯಾರಂಟಿ ಅಥವಾ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ” ಎಂದು ರಮೇಶ್ ಟೀಕಿಸಿದ್ದಾರೆ.