ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಅನುಷ್ಠಾನಗೊಂಡಿದೆ. ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುತ್ತಿದೆ. ಇದರಿಂದಾಗಿ, ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ನಷ್ಟವಾಗುತ್ತಿದೆ ಎಂದು ಖಾಸಗಿ ಬಸ್‌ಗಳ ಮಾಲೀಕರು ಹೇಳುತ್ತಿದ್ದಾರೆ. ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಪ್ರಾರಂಭವಾದ ಒಂದು ದಿನದಲ್ಲಿ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆಯಲ್ಲಿ 50% ಕುಸಿತ ಕಂಡಿದೆ ಎಂದು ಖಾಸಗಿ ಬಸ್ ನಿರ್ವಾಹಕರು ಸೋಮವಾರ ಹೇಳಿದ್ದಾರೆ.
“ನಮ್ಮ ಬಸ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವೇತನ ನೀಡಲು ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ. ಅವರು ತಮ್ಮ ಕುಟುಂಬಗಳನ್ನು ಪೋಷಿಸಲು ಹೇಗೆ ಸಾಧ್ಯ? ನಮ್ಮ ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಹಣವಿಲ್ಲ” ಎಂದು ಬೆಂಗಳೂರಿನ ಕೆಕೆ ಟ್ರಾವೆಲ್ಸ್ ಮಾಲೀಕ ನಿಸಾರ್ ಅಹಮದ್ ಹೇಳಿದ್ದಾರೆ.
“ಮಹಿಳೆಯರು ಈಗ ಸರ್ಕಾರಿ ಬಸ್‌ಗಳನ್ನು ಹತ್ತಲು ಕಾಯುತ್ತಾರೆ. ನಾವು ಬಹುತೇಕ ಖಾಲಿ ಬಸ್‌ಗಳಲ್ಲಿ ಸಂಚಾರ ಮಾಡಬೇಕಾಗಿದೆ. ರಾಜ್ಯದಲ್ಲಿ 10,000 ಖಾಸಗಿ ಬಸ್‌ಗಳಿವೆ. ಈ ಬಸ್‌ಗಳಲ್ಲಿನ ದುಡಿಯನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವಿಸುತ್ತಿವೆ. ಉಚಿತ ಬಸ್ ಪ್ರಯಾಣವನ್ನು ವಿಸ್ತರಿಸಬೇಕು ಅಥವಾ ನಷ್ಟವನ್ನು ಸರಿದೂಗಿಸಲು ನಮಗೆ ತೆರಿಗೆ ವಿನಾಯಿತಿ ನೀಡಬೇಕು” ಎಂದು ಮತ್ತೊಬ್ಬ ಬಸ್ ಮಾಲೀಕ ವಿ ಗೀತೇಶ್ ಹೇಳಿರುವುದಾಗಿ ‘ಟಿಓಐ’ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ?: ಶಕ್ತಿ ಯೋಜನೆ | ಮತ್ತಷ್ಟು ‘ಸ್ವಾತಂತ್ರ್ಯ’ದತ್ತ ಮಹಿಳೆಯರ ಸವಾರಿ
“ಖಾಸಗಿ ಬಸ್‌ಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ವಾಹನ ವಿಮೆ ಕಂತುಗಳನ್ನು ಮತ್ತು ತ್ರೈಮಾಸಿಕ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಒಂದು ಟೈರ್ ಬದಲಾವಣೆಗೆ ರೂ 24,000 ವೆಚ್ಚವಾಗುತ್ತದೆ ಮತ್ತು ರಸ್ತೆಗಳ ಕೆಟ್ಟ ಸ್ಥಿತಿಯಿಂದಾಗಿ, ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತವೆ” ಎಂದು ಅವರು ವಿವರಿಸಿದ್ದಾರೆ.