ಇತ್ತೀಚೆಗೆ ಭಾರತೀಯ ಸಂಸದರ ನೇತೃತ್ವದಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ, ಯುವ ಬಿಜೆಪಿ ಸಂಸದರೊಬ್ಬರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ ತೀವ್ರ ಮುಜುಗರಕ್ಕೊಳಗಾಗಿದ್ದಾರೆ ಎಂಬ ಮಾಧ್ಯಮಗಳ ವರದಿಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಇದು ಹಲವು ಗಂಭೀರ ವಿಷಯಗಳನ್ನು ಹುಟ್ಟು ಹಾಕಿದೆ ಎಂದು ಕಳವಳ ವ್ಯಕ್ತಪಡಿಸಿರುವ ಸಚಿವರು, ಈ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆ ಮೌನ ಮುರಿಯಬೇಕು ಎಂದು ಎಕ್ಸ್ ಪೋಸ್ಟ್ ನಲ್ಲಿ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರವೊಂದರ ನೇತೃತ್ವದ ಹೂಡಿಕೆ ನಿಯೋಗಕ್ಕೆ ತೆರಳಲು ಯಾವುದೇ ವಿವರಣೆ ನೀಡದೆ ಅನುಮತಿ ನಿರಾಕರಿಸುತ್ತದೆ. ಆದರೆ, ಬಿಜೆಪಿ ಸಂಸದರ ಬೇಕಾಬಿಟ್ಟಿ ವರ್ತನೆಗೆ ಹೇಗೆ ಬೇಕಾದರೂ ಅವಕಾಶ ನೀಡಲಾಗುತ್ತದೆ ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಎಂ.ಬಿ.ಪಾಟೀಲರ ಹೇಳಿಕೆ ಉದ್ಧಟತನದ ಪರಮಾವಧಿ
ಒಬ್ಬ ಹಾಲಿ ಸಂಸದ ದೇಶದ ಎಲ್ಲ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಮತ್ತೊಂದು ದೇಶದ ಮುಖ್ಯಸ್ಥರನ್ನು ಭೇಟಿ ಮಾಡಿದ್ದು ಹೇಗೆ? ಅಧಿಕೃತ ನಿಯೋಗದ ಜತೆ ತೆರಳಿದಾಗ ಬಾಲಿಶವಾಗಿ ವರ್ತಿಸಿದ್ದು ಸರಿಯೇ? ಈ ರೀತಿ ವರ್ತಿಸಿದ ಯುವ ಬಿಜೆಪಿ ಸಂಸದ ಯಾರು? ಶಿಷ್ಟಾಚಾರ ಉಲ್ಲಂಘಿಸಿದ್ದಕ್ಕೆ ಆತನ ವಿರುದ್ಧ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಪಾಕಿಸ್ತಾನದ ಜೊತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗ ಸಖ್ಯ ಪ್ರದರ್ಶಿಸಿ, ಆಪರೇಷನ್ ಸಿಂಧೂರ್‌ನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಸದ್ಯದ ಸೂಕ್ಷ್ಮ ಪರಿಸ್ಥಿತಿಯಲ್ಲಿ ಭಾರತೀಯ ಸಂಸದರೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಸಂಗತಿಯನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಪ್ರಸ್ತುತ ವಿಷಯವನ್ನು ಕೇವಲ ರಾಜಕೀಯ ದೃಷ್ಟಿಯಿಂದ ನಡೆಸುತ್ತಿರುವ ಗಾಸಿಪ್ ಎಂದು ಭಾವಿಸದೆ, ಮೌನ ಮುರಿದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.