ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಕೇರಳದ ಬಿಜೆಪಿ ಅಪಹಾಸ್ಯ ಮಾಡಲು ಆರಂಭಿಸಿದೆ. ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಬಹುದು ಎಂದು ವ್ಯಂಗ್ಯವಾಡಿದೆ.
ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಸುರೇಂದ್ರನ್ ಮತ್ತು ಹಿರಿಯ ನಾಯಕ ವಿ ಮುರಳೀಧರನ್, “ಕಾಂಗ್ರೆಸ್ ನಾಯಕರು ವಯನಾಡ್ ಜನರಿಗೆ ಮೋಸ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಸುರೇಂದ್ರನ್ ಸ್ಪರ್ಧಿಸಿದ್ದರು.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸುರೇಂದ್ರನ್, “ರಾಹುಲ್ ಗಾಂಧಿ ವಯನಾಡ್ ತನ್ನ ಕುಟುಂಬ ಎಂದು ಹೇಳಿಕೊಂಡಿದ್ದಾರೆ. ಈಗ ಅವರು ವಯನಾಡ್‌ನಲ್ಲಿ ಮುಂಬರುವ ಉಪಚುನಾವಣೆಗೆ ತಮ್ಮ ಸ್ವಂತ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ರಾಹುಲ್ ಅವರು ಪಾಲಕ್ಕಾಡ್ ಉಪಚುನಾವಣೆಯಲ್ಲಿ ತಮ್ಮ ಸೋದರಿಯ ಪತಿ ರಾಬರ್ಟ್ ವಾದ್ರಾ ಅವರನ್ನು ಕಣಕ್ಕಿಳಿಸುತ್ತಾರೆಂದು ಭಾವಿಸುತ್ತೇವೆ” ಎಂದಿದ್ದಾರೆ.
“ಈಗ ವಯನಾಡ್ ಜನರು ‘ರಾಹುಲ್ ಅವರ ಕುಟುಂಬದ ಭಾವನೆಗಳನ್ನು’ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ. ನೆಹರು-ಗಾಂಧಿ ಕುಟುಂಬ ಎಂದು ಕರೆಯಲ್ಪಡುವ ತಮ್ಮ ಕುಟುಂಬದ ಹಿತಾಸಕ್ತಿಗಳನ್ನು ಪೂರೈಸಲು ಅವರಿಗೆ ಕಾಂಗ್ರೆಸ್ ಏಕೈಕ ಸಾಧನವಾಗಿದೆ ಎಂಬುದು ಮತ್ತೊಮ್ಮೆ ನಿಸ್ಸಂದೇಹವಾಗಿ ಸಾಬೀತಾಗಿದೆ” ಎಂದು ಅವರು ಹೇಳಿದ್ದಾರೆ.
ಇನ್ನು, ಸುದ್ದಿಗಾರರೊಂದಿಗೆ ಮಾತನಾಡಿದ ಮುರಳೀಧರನ್, “ಕಾಂಗ್ರೆಸ್ ಧೋರಣೆಯನ್ನು ರಾಜ್ಯದ ಜನರು ಒಪ್ಪುವುದಿಲ್ಲ. ರಾಹುಲ್ ಕುಟುಂಬದವರಿಗೆ ಜನರು ಯಾವುದೇ ಪ್ರಜಾಸತ್ತಾತ್ಮಕ ಸೌಜನ್ಯ ತೋರಿಸುವ ಅಗತ್ಯವಿಲ್ಲ” ಎಂದಿದ್ದಾರೆ.
“ರಾಜ್ಯದಲ್ಲಿ ಚುನಾವಣೆ ಮುಗಿಯುವವರೆಗೆ ರಾಯ್‌ಬರೇಲಿಯಿಂದ ಸ್ಪರ್ಧಿಸುವ ತನ್ನ ಯೋಜನೆಯನ್ನು ಮುಚ್ಚಿಟ್ಟು ರಾಹುಲ್ ಗಾಂಧಿ ವಯನಾಡ್ ಜನತೆಗೆ ಮೋಸ ಮಾಡಿದ್ದಾರೆ. ಮುಂಬರುವ ಉಪಚುನಾವಣೆಯಲ್ಲಿ ತಮ್ಮ ಪ್ರಜಾಸತ್ತಾತ್ಮಕ ಶಕ್ತಿಯನ್ನು ಬಳಸಿಕೊಂಡು ಕಾಂಗ್ರೆಸ್‌ನ ಈ ಧೋರಣೆಗೆ ವಯನಾಡ್ ಜನರು ಉತ್ತರ ನೀಡಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
Mr @RahulGandhi claimed that Wayand is his family. Now he has decided the candidature of his own sister @priyankagandhi to the upcoming by-election in Wayanad. Hope that Mr Rahul will field his brother-in-law @irobertvadra in the Palakkad by-election. Now the people clearly… pic.twitter.com/O3iXC1AvPt
— K Surendran (@surendranbjp) June 18, 2024
ವಯನಾಡ್‌ಗೆ ಪ್ರಿಯಾಂಕಾ ಗಾಂಧಿ ಆಗಮನದ ವಿರುದ್ಧ ರಾಜಕೀಯ ವಿರೋಧಿಗಳ ಟೀಕೆಗಳನ್ನು ತಿರಸ್ಕರಿಸಿದ ಕಾಂಗ್ರೆಸ್ ಹಿರಿಯ ನಾಯಕ ವಿ.ಡಿ ಸತೀಶನ್, “ವಯನಾಡ್ ಮಾತ್ರವಲ್ಲದೆ ಇಡೀ ಕೇರಳ ರಾಜ್ಯವು ಪ್ರಿಯಾಂಕಾ ಅವರನ್ನು ಹೃದಯದಿಂದ ಅಪ್ಪಿಕೊಳ್ಳುತ್ತದೆ” ಎಂದಿದ್ದಾರೆ.
“ರಾಹುಲ್ ಗಾಂಧಿಯನ್ನು ಒಪ್ಪಿಕೊಂಡಂತೆ, ಜನರು ಪ್ರಿಯಾಂಕಾ ಅವರನ್ನು ಸಹ ಸ್ವೀಕರಿಸುತ್ತಾರೆ. ಪ್ರಿಯಾಂಕಾ ಅವರು ದೇಶದಲ್ಲಿ ಫ್ಯಾಸಿಸ್ಟ್ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ತೀವ್ರವಾದ ಹೋರಾಟ ನಡೆಸುತ್ತಿರುವ ಮುಂಚೂಣಿ ಪ್ರಚಾರಕರಾಗಿದ್ದಾರೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಿಯಾಂಕಾ ಅವರನ್ನು ಕೇರಳಕ್ಕೆ ಒಗ್ಗಟ್ಟಾಗಿ ಸ್ವಾಗತಿಸುತ್ತಿದೆ. ರಾಹುಲ್‌ಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಪ್ರಿಯಾಂಕಾ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.
ಉತ್ತರದಲ್ಲಿನ ರಾಜಕೀಯ ಪರಿಸ್ಥಿತಿಯಿಂದಾಗಿ ರಾಯ್ ಬರೇಲಿಯನ್ನು ಉಳಿಸಿಕೊಳ್ಳಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ವಯನಾಡ್ ಕ್ಷೇತ್ರವನ್ನು ತೊರೆದಿದ್ದಾರೆ. ಇದು ರಾಜಕೀಯ ನಿರ್ಧಾರ. ಪ್ರಧಾನಿ ಮೋದಿ ಸೇರಿದಂತೆ ಹಲವಾರು ನಾಯಕರು ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ ಎಂದು ಸತೀಶನ್ ಹೇಳಿದ್ದಾರೆ.
ರಾಹುಲ್ ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರಗಳಲ್ಲಿ ಗೆದ್ದಿದ್ದರು.