ತನ್ನ ಕೆನ್ನೆಯ ಬಗ್ಗೆ ಮಾತನಾಡಿದ್ದ ಬಿಜೆಪಿ ನಾಯಕ ರಮೇಶ್ ಬಿಧುರಿ ಅವರಿಗೆ ಸಂಸದೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ. “ನಿಮ್ಮ ಕೆನ್ನೆಯ ಬಗ್ಗೆ ನೀವು ಮಾತನಾಡಿಕೊಳ್ಳಿ” ಎಂದಿದ್ದಾರೆ.
ತಾನು ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯ ಕಲ್ಕಾಜಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ಪ್ರಿಯಾಂಕಾ ಗಾಂಧಿಯ ಕೆನ್ನೆಯಂತೆ ನುಣುಪಾದ ರಸ್ತೆಗಳನ್ನು ನಿರ್ಮಿಸುವುದಾಗಿ ಬಿಜೆಪಿ ನಾಯಕ ರಮೇಶ್ ಬಿಧುರಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಪ್ರಿಯಾಂಕಾ ಗಾಂಧಿ ಬಗ್ಗೆ ಬಿಜೆಪಿ ನಾಯಕ ಬಿಧುರಿ ಹೇಳಿಕೆ; ದೂರು ದಾಖಲಿಸಿದ ಕಾಂಗ್ರೆಸ್
ಈ ಹೇಳಿಕೆಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, ಈ ಹೇಳಿಕೆಯು “ಹಾಸ್ಯಾಸ್ಪದ” ಎಂದು ಕರೆದಿದ್ದಾರೆ. “ಅಂತಹ ಅಸಂಬದ್ಧ ವಿಷಯಗಳ ಬದಲಿಗೆ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಮುಖ ವಿಷಯಗಳನ್ನು ಚರ್ಚಿಸಬೇಕು” ಎಂದು ಹೇಳಿದರು.
“ಇದು ಹಾಸ್ಯಾಸ್ಪದ ಹೇಳಿಕೆ, ಅಪ್ರಸ್ತುತವಾದ ಹೇಳಿಕೆಯಾಗಿದೆ. ಅವರು ತಮ್ಮ ಕೆನ್ನೆಯ ಬಗ್ಗೆ ಮಾತನಾಡಿಲ್ಲ. ದೆಹಲಿಯಲ್ಲಿ ಚುನಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಅಗತ್ಯ ವಿಚಾರಗಳ ಬಗ್ಗೆ ಮಾತನಾಡಬೇಕು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನುಣುಪಾದ ರಸ್ತೆ ನಿರ್ಮಾಣ : ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಖಂಡನೆ
ಇನ್ನು ಈ ಹಿಂದೆ ಸೆಪ್ಟೆಂಬರ್ 21 ರಂದು ಲೋಕಸಭೆಯ ಅಧಿವೇಶನದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಡ್ಯಾನಿಶ್ ಅಲಿ ವಿರುದ್ಧವೂ ರಮೇಶ್ ಬಿಧುರಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.
ಡ್ಯಾನಿಶ್ ಅವರ ಬಗ್ಗೆ ಬಿಜೆಪಿ ಸಂಸದ ರಮೆಶ್ ಬಿಧುರಿ ‘ಮುಲ್ಲಾ’ ‘ಆತಂಕವಾದಿ’ (ಭಯೋತ್ಪಾದಕ) ಮತ್ತು ‘ಉಗ್ರವಾದಿ’ ಎಂದು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಬಳಿಕ ವಿವಾದ ಹೆಚ್ಚಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದರು. ಆದರೆ ಪ್ರಿಯಾಂಕಾ ಗಾಂಧಿ ಬಗ್ಗೆ ತಾನು ನೀಡಿರುವ ಹೇಳಿಕೆಗೆ ಈವರೆಗೂ ಕ್ಷಮೆಯಾಚಿಸಿಲ್ಲ. ಬದಲಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತಾ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
