ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮತ ಗಳಿಸಲು ಗಾಂಧಿ ಕುಟುಂಬದ ‘ನಕಲಿ’ ಗಾಂಧಿ ಉಪನಾಮವನ್ನು ಬಳಸಿಕೊಂಡಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ರಾಜಸ್ಥಾನದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಮಹಿಳೆಯರ ಮಂಗಳಸೂತ್ರಗಳನ್ನು ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಎಂದು ಹೇಳಿದ ಬಳಿಕ, ನಾನಾ ರೀತಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವುದನ್ನು ಬಿಜೆಪಿ ನಾಯಕರು ಮುಂದುವರೆಸಿದ್ದಾರೆ. ಮಧ್ಯಪ್ರದೇಶದ ಗುಣಾದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮೋಹನ್ ಯಾದವ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
“ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊಮ್ಮಗಳು ವಿವಾಹವಾಗಿದ್ದರೂ ಮಂಗಳಸೂತ್ರ ಧರಿಸಿಲ್ಲ. ನಮ್ಮ ಸಂಪ್ರದಾಯದ ಪ್ರಕಾರ, ಮಗಳು ಮದುವೆಯಾದ ತಕ್ಷಣ, ಅವಳು ತನ್ನ ಅತ್ತೆ ಮನೆಯ ಉಪನಾಮವನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಳ್ಳುತ್ತಾಳೆ. ಆದರೆ, ಈ ಮತದ ದಾಹವುಳ್ಳ ಜನರು ಇಂದಿಗೂ ತಮ್ಮ ಉಪನಾಮದಲ್ಲಿ ‘ಗಾಂಧಿ’ ಎಂದೇ ಬಳಸುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಹೇಗೆ? ನಿಜವಾದ ಗಾಂಧಿ ಕುಟುಂಬದ ಸದಸ್ಯರು ಎಲ್ಲಿದ್ದಾರೆಂದು ಯಾರಿಗೆ ಗೊತ್ತು? ಅವರೆಲ್ಲ ನಕಲಿ ಗಾಂಧಿಗಳು. ಅವರು ಕೇವಲ ಗಾಂಧಿ ಹೆಸರಿನಲ್ಲಿ ಮತಗಳನ್ನು ಪಡೆಯಲು ಬಯಸುತ್ತಾರೆ” ಎಂದು ಹೇಳಿದ್ದಾರೆ.
ಗಮನಿಸಿ: ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಹೇಳಿಕೆಗಳು ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರತಿಪಾದಿಸುತ್ತವೆ. ಗಂಡಿನಂತೆಯೇ ಹೆಣ್ಣು ಕೂಡ ಸ್ವತಂತ್ರಳು, ಆಕೆ ವಿವಾಹಕ್ಕೂ ಮುನ್ನ ತಂದೆಯ ಹೆಸರು ಹಾಗೂ ವಿವಾಹ ನಂತರ ಗಂಡನ ಹೆಸರಿನೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಅಗತ್ಯವಿಲ್ಲ. ಅಂತಹ ಯಾವುದೇ ಕಾನೂನು ಕೂಡ ಭಾರತದಲ್ಲಿ ಇಲ್ಲ. ಮಹಿಳೆಯರು ಕೂಡ ತನ್ನದೇ ಆತ ಗುರುತನ್ನ ಹೊಂದುವ ಹಕ್ಕು ಹೊಂದಿದ್ದಾರೆ. ಅವರ ಗುರತನ್ನು ಪುರುಷರೊಂದಿಗೆ ಗುರುತಿಸುವ ಅಗತ್ಯವಿಲ್ಲ. ಬಿಜೆಪಿ ನಾಯಕರ ಹೇಳಿಕೆಗಳು ಮನುಸ್ಮೃತಿ ಅಂಶಗಳನ್ನು ಹೊಂದಿವೆ. ಈ ಮನುಸ್ಮೃತಿ ಹೆಣ್ಣು ಗಂಡಿನ ಅಧೀನಳು ಎಂದು ಹೇಳುತ್ತದೆ.