ಗುತ್ತಿಗೆದಾರರ ಕಾಮಗಾರಿಗಳ ಬಾಕಿ ಬಿಲ್ 5-6 ತಿಂಗಳಿಂದ ಆಗಿರಲಿಲ್ಲ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿಳಿಸಿದ್ದಾರೆ.
ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಶೀಘ್ರ ಹಣ ಬಿಡುಗಡೆಗೊಳಿಸಲು 30 ದಿನಗಳ ಗಡುವು ನೀಡಿದ್ದ ಗುತ್ತಿಗೆದಾರರು, ಇಂದು(ಶನಿವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ. ಕೆಂಪಣ್ಣ, ಸದ್ಯ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಆದಷ್ಟು ಬೇಗ ಬಾಕಿ ಇರುವ ಎಲ್ಲ ಬಿಲ್ ಪಾವತಿ ಮಾಡುತ್ತೇವೆ. ಒಂದು ತಿಂಗಳಿನಲ್ಲಿ ಎಲ್ಲ ಅಧಿಕಾರಿಗಳ ಜೊತೆ ಸಭೆ ನಡೆಸಿ, ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಮಾತು ಕೊಟ್ಟಿದ್ದಾರೆ. ಹಂತ ಹಂತವಾಗಿಯೂ ಕೆಲವು ಹಣ ಬಿಡುಗಡೆ ಮಾಡುತ್ತೇವೆ ಎಂದು ಕೂಡ ತಿಳಿಸಿದ್ದಾರೆ ಎಂದು ಹೇಳಿದರು.
‘ಬಿಬಿಎಂಪಿ ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆ’
‘ಗುತ್ತಿಗೆದಾರರೊಂದಿಗೆ ಕೆಲವು ಅಧಿಕಾರಿಗಳು ಸರಿಯಾಗಿ ವರ್ತನೆ ಮಾಡುತ್ತಿಲ್ಲ. ಈ ಬಗ್ಗೆಯೂ ಮುಕ್ತವಾಗಿ ತಿಳಿಸಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಬಿಬಿಎಂಪಿಯಲ್ಲಿ ಕಮಿಷನರ್ ಹಾಗೂ ಚೀಫ್ ಇಂಜಿನಿಯರ್‌ನಿಂದ ತುಂಬಾ ಹಿಂಸೆ ನೀಡುತ್ತಿದ್ದಾರೆ. ಹಣ ಕೇಳುತ್ತಿದ್ದಾರೆ. ಹಿಂಸೆ ಆಗುತ್ತಿದೆ’ ಎಂದು ಕೆಂಪಣ್ಣ ಬಹಿರಂಗವಾಗಿ ತಿಳಿಸಿದರು.
ಈ ಉತ್ತರಕ್ಕೆ ಪತ್ರಕರ್ತರು, ಅಧಿಕಾರಿಗಳು ಎಷ್ಟು ಪರ್ಸೆಂಟ್ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೆಂಪಣ್ಣ, ಹಣ ಕೇಳುತ್ತಿದ್ದಾರೆ ಅಂತ ತಿಳಿಸಿದ್ದೇವೆ. ಇಷ್ಟು ಪರ್ಸೆಂಟೇಜ್ ಅಂತ ಅವರೂ ಹೇಳಿಲ್ಲ, ನಾನೂ ಕೇಳಿಲ್ಲ. ಹಾಗಾಗಿ, ಭ್ರಷ್ಟಾಚಾರ ನಡೀತಾ ಇದೆ ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ಕೊಟ್ಟಿದ್ದೇವೆ. ಅಧಿಕಾರಿಗಳನ್ನು ಕರೆಸಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.