ಪಿಎಸ್‌ಐ ನೇಮಕಾತಿ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದು, ದ್ವೇಷದ ರಾಜಕಾರಣ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಹಗರಣ ನಾವೇ ಹೊರಗೆ ತಂದು ಸಿಐಡಿ ತನಿಖೆಗೆ ಆದೇಶ ಮಾಡಿದ್ದೆವು. ಪ್ರಕರಣದಲ್ಲಿ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದೇವೆ. ಈ ಹಗರಣದಲ್ಲಿ ಕಾಂಗ್ರೆಸ್ ನವರೂ ಇದ್ದಾರೆ. ಪ್ರಕರಣದ ತನಿಖೆ ನಡೆದು ಕೋರ್ಟ್‌ನಲ್ಲಿದೆ. ಈ ಸಂದರ್ಭ ಮತ್ತೆ ತನಿಖೆಗೆ ಆದೇಶ ಮಾಡಿರುವುದು ದ್ವೇಷ ರಾಜಕೀಯವನ್ನು ತೋರಿಸುತ್ತದೆ ಎಂದು ಹೇಳಿದರು.
ಗಾಂಧೀಜಿ, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜಿಸಿ ಎಂದಿದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರು ಗೋಡ್ಸೆ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲಿ ಎಂದು ಹೇಳಿದ್ದಾರೆ. ನಕಲಿ ಗಾಂಧಿಗಳ ಜಪ ಮಾಡುತ್ತಿರುವವರು ಕಾಂಗ್ರೆಸ್ ನವರು. ಗಾಂದೀಜಿಯನ್ನು ಹೆಚ್ಚು ದುರುಪಯೋಗ ಮಾಡಿಕೊಂಡವರು ಕಾಂಗ್ರೆಸ್ ನವರು. ಗಾಂಧೀಜಿ ಅವರು ಸ್ವಾತಂತ್ರ್ಯದ ನಂತರ ಕಾಂಗ್ರೆಸ್‌ನ್ನು ವಿಸರ್ಜಿಸಿ ಎಂದು ಹೇಳಿದ್ದರು. ಯಾಕೆಂದರೆ ಕಾಂಗ್ರೆಸ್ ನವರಿಗೆ ದೇಶ ಆಳಲು ಬರುವುದಿಲ್ಲ ಎಂದು. ಆದರೆ, ಇವರು ಗಾಂಧೀಜಿ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ವಿರೋಧ ಪಕ್ಷದವರಿಲ್ಲದೇ ಬಜೆಟ್ ಚರ್ಚೆಗೆ ಉತ್ತರ ನೀಡಿದ್ದು ಇದೇ ಮೊದಲು: ಸಿಎಂ ಸಿದ್ದರಾಮಯ್ಯ
ಬೆಲೆ ಏರಿಕೆಯಿಂದ ಜನಜೀವನ ದುಸ್ತರ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜೀವನ ದುಸ್ತರ ಆಗಿದೆ. ಸರ್ಕಾರ ಬಂದ ತಕ್ಷಣ ವಿದ್ಯುತ್ ದರ ಹೆಚ್ಚಳ ಮಾಡಿದರು. ಎಲ್ಲ ಕಾಯಿಪಲ್ಯೆ ದರ ಹೆಚ್ಚಳ ಆಗಿದೆ. ಈಗ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಆಗಸ್ಟ್ 1ರ ನಂತರ ಸೈಟ್, ಕಾರು, ಹೊಸ ಮನೆ ಖರೀದಿ ದರವೂ ಹೆಚ್ಚಳವಾಗಲಿದೆ ಎಂದು ಕಿಡಿಕಾರಿದರು.