ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಐದು ವರ್ಷಗಳು ಕಳೆಯುತ್ತಾ ಬಂದಿವೆ. ಆದರೂ, ಹಲವಾರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿಅಧ್ಯಕ್ಷ-ಉಪಾಧ್ಯರೇ ಇಲ್ಲದೆ, ಆಡಳಿತಾಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಆಡಳಿತ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 111 ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಇದು ಜನಾದೇಶಕ್ಕೆ ವಿರುದ್ಧವಾಗಿದೆ.
ಸ್ಥಳೀಯ ಚುನಾವಣೆ ನಡೆದು, ಫಲಿತಾಂಶ ಬಂದ ಮೊದಲ ಮೂವತ್ತು ತಿಂಗಳೂ ಕೂಡ ಹಲವೆಡೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯಲಿಲ್ಲ. ಆಗಲೂ ಕಾರ್ಯಾಂಗದ ಅಧಿಕಾರಿಗಳೇ ಆಡಳಿತಾಧಿಕಾರಿ ಳಾಗಿ ಕೆಲಸ ಮಾಡಿದ್ದರು. ಚುನಾಔಣೆ ನಡೆದು ಎರಡೂವರೆ ವರ್ಷಗಳ ನಂತರ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಆಗ ಜನಪ್ರತಿನಿಧಿಗಳಿಗೆ ಅಧಿಕಾರ ದೊರೆಯಿತು. ನಂತರ, ಜನಸಾಮಾನ್ಯರು ತಮ್ಮ ಜನಪ್ರತಿನಿಧಿಗಳ ಭೇಟಿ ಮಾಡಿ, ತಮ್ಮ ಸಮಸ್ಯೆಗಳನ್ನು ಮುಂದಿಡಲಾರಂಭಿಸಿದರು.
ಈಗ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಅಧಿಕಾರವಧಿ ಮುಗಿದಿದ್ದು, ಆ ಸ್ಥಾನಗಳು ತೆರವಾಗಿವೆ. ಆದರೆ, ಆ ಸ್ಥಾನಗಳಿಗೆ ಮತ್ತೆ ಚುನಾವಣೆಗಳು ನಡೆದಿಲ್ಲ. ಪರಿಣಾಮ 111 ನಗರ ಸ್ಥಳೀಯ ಸಂಸ್ಥೆಗಳು ಮತ್ತೆ ಆಡಳಿತಾಧಿಕಾರಿಗಳ ಆಡಳಿತಕ್ಕೆ ಒಳಪಟ್ಟಿವೆ. ಈ ರೀತಿ, ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಪದೇ-ಪದೇ ಆಡಳಿತಾಧಿಕಾರಿಗಳ ಕೈ ಸೇರುತ್ತಿರುವುದು, ಅಧಿಕಾರ ವಿಕೇಂದ್ರೀಕರಣದ ಮೂಲ ಆಶಯಗಳನ್ನು ಮೂಲೆಗೆ ತಳ್ಳಿದಂತಾಗುತ್ತದೆ.
ಸ್ಥಳೀಯ ಸಂಸ್ಥೆಗಳು ಮೂಲಭೂತ ಸೌಕರ್ಯಗಳ ಕಲ್ಪಿಸುವಲ್ಲಿ ವ್ಯವಸ್ಥೆಯ ಮೊದಲ ಹಂತವೇ ಆಗಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರ ಹಾಗೂ ಅಧಿಕಾರ ಬಹಳ ಮಹತ್ವದ್ದಾಗಿದೆ. ಹೀಗಾಗಿ, ಹೊಸ ಸರ್ಕಾರ ಕೂಡಲೇ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಬೇಕು. ಅಧಿಕಾರದ ಚುಕ್ಕಾಣಿಯನ್ನು ಜನಪ್ರತಿನಿಧಿಗಳಿಗೆ ನೀಡಬೇಕು.
-ಸಂತೋಷ ಕುಮಾರ್, ಮದ್ದೂರು