- ಮುಂಬೈನ ಸಿಯಾನ್ ರೈಲ್ವೇ ನಿಲ್ದಾಣದಲ್ಲಿ ಆ.13ರಂದು ನಡೆದ ಆಘಾತಕಾರಿ ಘಟನೆ
- ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ : ಕೊಲೆ ಆರೋಪದಡಿ ದಂಪತಿ ಬಂಧಿಸಿದ ಪೊಲೀಸರು
ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೇ ಎಂಬ ನಾಣ್ಣುಡಿಯೊಂದು ನಮ್ಮ ನಡುವೆ ಚಾಲ್ತಿಯಲ್ಲಿದೆ. ಅದೇ ರೀತಿ ಅಕಸ್ಮಾತ್ ಪತ್ನಿಗೆ ತಾಗಿದ್ದ ವ್ಯಕ್ತಿಯೋರ್ವನ ಕೆನ್ನೆಗೆ ಬಾರಿಸಿದ ಪತಿರಾಯನಿಂದಾಗಿ, ದಂಪತಿ ಈಗ ಜೈಲು ಕಂಬಿ ಎಣಿಸಬೇಕಾದ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಮುಂಬೈ ಸಮೀಪ ನಡೆದಿದೆ.
ಕಳೆದ ಆಗಸ್ಟ್ 13ರಂದು ಮುಂಬೈನ ಸಿಯಾನ್ ರೈಲ್ವೆ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮುಂಬೈನ ಸಿಯಾನ್ ರೈಲ್ವೆ ನಿಲ್ದಾಣದಲ್ಲಿ ಅವಿನಾಶ್ ಮತ್ತು ಶೀತಲ್ ದಂಪತಿ ರೈಲಿಗಾಗಿ ಪ್ಲಾಟ್‌ಫಾರಂನಲ್ಲಿ ಕಾಯುತ್ತಿದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ದಿನೇಶ್ ಎಂಬಾತ ಅಚಾತುರ್ಯದಿಂದ ಶೀತಲ್‌ಗೆ ತಾಗಿದ್ದಾನೆ.
ಮೊದಲು ಆಕೆ ತನ್ನ ಛತ್ರಿಯಿಂದ ಆತನಿಗೆ ಬಡಿಯಲು ಯತ್ನಿಸಿದ್ದಾಳೆ. ಇದೇ ವೇಳೆ ಅನತಿ ದೂರದಲ್ಲಿ ನಿಂತಿದ್ದ ಆಕೆಯ ಪತಿರಾಯ ದಿನೇಶ್ ಕೆನ್ನೆಗೆ ರಭಸದಿಂದ ಬಾರಿಸಿದ್ದಾನೆ. ಈ ವೇಳೆ ಆಯತಪ್ಪಿದ ದಿನೇಶ್, ರೈಲ್ವೆ ಟ್ರ್ಯಾಕ್‌ಗೆ ಬಿದ್ದಿದ್ದಾನೆ. ಅದೇ ವೇಳೆ ಬಂದ ರೈಲು ದಿನೇಶ್ ಮೇಲೆ ಹರಿದಿದೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಗಿರುವುದು ಇಷ್ಟು ಘಟನೆ. ಈಗ ದಂಪತಿ ಜೈಲು ಪಾಲಾಗಿದ್ದಾರೆ.
‘ಆಗಸ್ಟ್ 13ರಂದು ಸಿಯೋನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ -1ರಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಜೊತೆಗೆ ದಂಪತಿಗಳು ಜಗಳವಾಡಿದ್ದಾರೆ. ನಂತರ ಆತನ ಕೆನ್ನೆಗೆ ಪತಿ ಬಾರಿಸಿದ್ದಾರೆ. ಈ ಹೊಡೆತದ ರಭಸಕ್ಕೆ ಹಳಿ ಮೇಲೆ ಬಿದ್ದಿದ್ದು, ಬಳಿಕ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ದಂಪತಿ ಸ್ಥಳದಿಂದ ಪರಾರಿಯಾಗಿದ್ದರು. ಆ ಬಳಿಕ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ, ದಂಪತಿಯನ್ನು ಪತ್ತೆ ಹಚ್ಚಿದ್ದು, ಬಂಧಿಸಲಾಗಿದೆ’ ಎಂದು ದಾದರ್ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ದಂಪತಿಯನ್ನು ಅವಿನಾಶ್ ಮಾನೆ (31) ಮತ್ತು ಶೀತಲ್ ಮಾನೆ (30) ಎಂದು ಗುರುತಿಸಲಾಗಿದೆ. ಇವರು ಕೊಲ್ಹಾಪುರ ಮೂಲದವರು. ಮನ್ಖುರ್ದ್‌ನಲ್ಲಿ ಪತ್ತೆಹಚ್ಚಿ, ಬಂಧಿಸಲಾಗಿದೆ. ಮೃತಪಟ್ಟವನನ್ನು ದಿನೇಶ್ ರಾಥೋಡ್ ಎಂದು ಗುರುತಿಸಲಾಗಿದೆ. ಈತ ಘನ್ಸೋಲಿ ಪ್ರದೇಶದ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮದ್ಯದ ಅಮಲಿನಲ್ಲಿದ್ದ ರಾಥೋಡ್, ಶೀತಲ್ ಅನ್ನು ಸ್ಪರ್ಶಿಸಿದ್ದಾನೆ. ಆ ಬಳಿಕ ಅವಿನಾಶ್ ಕೆನ್ನೆಗೆ ಬಾರಿಸಿದ್ದರಿಂದ ಈ ಘಟನೆ ನಡೆದಿದೆ. ಚಲಿಸುವ ರೈಲಿಗೆ ಸಿಲುಕಿ ಸಾಯಬಹುದು ಎಂದು ತಿಳಿದಿದ್ದರೂ ಕೂಡ ರಾಥೋಡ್‌ನನ್ನು ರಕ್ಷಿಸಲು ದಂಪತಿಗಳು ಸಹಾಯ ಮಾಡಲಿಲ್ಲ. ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿದ್ದೇವೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಮತ್ತು ಸಾಮಾನ್ಯ ಉದ್ದೇಶದ ಅಪರಾಧವಲ್ಲದ ನರಹತ್ಯೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ದಂಪತಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.