ಪಂಜಾಬ್ | ಎಎಪಿ-ಎಸ್‌ಎಡಿ-ಕಾಂಗ್ರೆಸ್‌ ನಡುವಿನ ಕದನದಲ್ಲಿ ನಲುಗುತ್ತಿದೆ ಬಿಜೆಪಿ

Date:

Advertisements

20024ರ ಲೋಕಸಭಾ ಚುನಾವಣೆಯ ಅಂತಿಮ ಹಂತದಲ್ಲಿ ಜೂನ್ 1ರಂದು ಪಂಜಾಬ್‌ಮತದಾನ ಮಾಡಲಿದೆ. ರಾಜ್ಯದಲ್ಲಿ ಎಎಪಿ, ಕಾಂಗ್ರೆಸ್‌, ಎಸ್‌ಎಡಿ ಹಾಗೂ ಬಿಜೆಪಿ ನಡುವೆ ಚತುಷ್ಕೋನ ಸ್ಪರ್ಧೆಯಿದೆ. ನಾಲ್ಕು ಪಕ್ಷಗಳು ತಮ್ಮ ನೆಲೆಯನ್ನು ಭದ್ರ ಮಾಡಿಕೊಳ್ಳಲು ಹವಣಿಸುತ್ತಿವೆಯಾದರೂ, ಈವರೆಗೆ ಗಟ್ಟಿ ನೆಲೆಯನ್ನೇ ಕಾಣದ ಬಿಜೆಪಿ ಉಳಿದ ಮೂರು ಪಕ್ಷಗಳ ನಡುವಿನ ಕದನದ ಮಧ್ಯೆ ಸಿಲುಕಿ ನಲುಗುತ್ತಿದೆ.

2022ರಲ್ಲಿ ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಎಎಪಿ, ಅದೇ ಜನಪ್ರಿಯತೆಯನ್ನು ಈ ಚುನಾವಣೆಯಲ್ಲಿಯೂ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಇತ್ತ, ಅದೇ 2022ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌, ತನ್ನ ಕೋಟೆಯನ್ನು ಮತ್ತೆ ಭದ್ರ ಮಾಡಿಕೊಳ್ಳಲು ಶ್ರಮಿಸುತ್ತಿದೆ. ವಿಶೇಷವೂ, ಗಮನಾರ್ಹವೂ ಅದ ಸಂಗತಿ ಎಂದರೆ, ಎಎಪಿ ಮತ್ತು ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿವೆ. ಎರಡೂ ಪಕ್ಷಗಳು ಉಳಿದೆಲ್ಲ ರಾಜ್ಯಗಳಲ್ಲಿ ಒಟ್ಟಿಗೆ ಹೋರಾಡುತ್ತಿದ್ದರೂ, ಪಂಜಾಬ್‌ನಲ್ಲಿ ಬಿಜೆಪಿಗೆ ನೆಲೆ ಕೊಡಬಾರದೆಂಬ ಕಾರಣಕ್ಕೆ, ಪರಸ್ಪರ ವಿರುದ್ಧವಾಗಿ ಕಣಕ್ಕಿಳಿದಿವೆ.

ಇತ್ತ, 1996ರಿಂದ 2020ರವರೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಶಿರೋಮಣಿ ಅಕಾಲಿದಳ (ಎಸ್‌ಎಡಿ) 2020ರಲ್ಲಿ ನಡೆದ ಬೃಹತ್ ರೈತ ಹೋರಾಟದ ಸಮಯದಲ್ಲಿ ಎನ್‌ಡಿಎ ತೊರೆದು ಹೊರಬಂದಿದೆ. ಪಂಜಾಬ್‌ನಲ್ಲಿ ಎಸ್‌ಎಡಿ ಮುಂದಾಳತ್ವದಲ್ಲಿ ಜನರಿಂದ ಒಂದಷ್ಟು ಮತಗಳನ್ನು ಪಡೆಯುತ್ತಿದ್ದ ಬಿಜೆಪಿ ಈಗ ದಿಕ್ಕಿಲ್ಲದಂತಾಗಿದೆ. ಸದ್ಯ, ರಾಜ್ಯದಲ್ಲಿ ಗುರುತಿಸಿಕೊಳ್ಳುತ್ತಿರುವ ಪ್ರಮುಖ ನಾಲ್ಕೂ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧೆಯಲ್ಲಿವೆ. ಪಂಜಾಬ್‌ನ ಎಲ್ಲ 13 ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಪಕ್ಷಗಳ ನಡುವೆ, ಸಿಖ್‌ ಕಟ್ಟರ್‌ವಾದಿ ಸಿಮ್ರಂಜಿತ್ ಸಿಂಗ್ ಮಾನ್ ನೇತೃತ್ವದ ಶಿರೋಮಣಿ ಅಕಾಲಿದಳ (ಅಮೃತಸರ) ಹಾಗೂ ನೆಲೆ ಕಳೆದುಕೊಂಡಿರುವ ಬಿಎಸ್‌ಪಿ ಕೂಡ ಸ್ಪರ್ಧೆಯಲ್ಲಿವೆ.

Advertisements

2019ರಲ್ಲಿ, ಲೋಕಸಭಾ ಚುನಾವಣೆ ನಡೆದಾಗ ಸ್ಪರ್ಧೆಯು ಕಾಂಗ್ರೆಸ್, ಎಸ್‌ಎಡಿ-ಬಿಜೆಪಿ ಮೈತ್ರಿ ಹಾಗೂ ಎಎಪಿ ನಡುವಿನ ತ್ರಿಕೋನ ಹೋರಾಟವಾಗಿತ್ತು. ಈಗ ಬಹುಕೋನ ಸ್ಪರ್ಧೆಯಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದು, 41% ಮತ ಪಾಲನ್ನು ಪಡೆದುಕೊಂಡಿತ್ತು. ಎಎಪಿ ಒಂದು ಸ್ಥಾನದೊಂದಿಗೆ 7% ಮತಗಳಿಸಿತ್ತು. ಬಿಜೆಪಿ ಮತ್ತು ಎಸ್‌ಎಡಿ ತಲಾ ಎರಡು ಸ್ಥಾನಗಳೊಂದಿಗೆ ಕ್ರಮವಾಘಿ 9% ಮತ್ತು 28% ಮತಪಾಲನ್ನು ಪಡೆದಿದ್ದವು.

ಈಗ, ರಾಜಕೀಯ ಚಿತ್ರಣ ಬದಲಾಗಿದೆ. ರಾಜ್ಯದಲ್ಲಿ ಎಎಪಿ ಪ್ರಬಲವಾಗಿದ್ದು, ಅಧಿಕಾರದಲ್ಲಿಯೂ ಇದೆ. ತನ್ನ ಕಾರ್ಯಕ್ಷಮತೆ ಮತ್ತು ಯೋಜನೆಗಳ ಮೇಲೆ ಮತ ಕೇಳುತ್ತಿದೆ. ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಿರುವ ಪಕ್ಷಕ್ಕೆ, ತನ್ನ ಜನಪ್ರಿಯತೆ ಹೇಗಿದೆ ಎಂಬುದನ್ನು ಅರಿಯಲು ಈ ಚುನಾವಣೆ ನಿರ್ಣಾಯಕ ಪರೀಕ್ಷೆಯೂ ಆಗಿದೆ. ಚುನಾವಣಾ ಪ್ರಚಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪ್ರತಿಷ್ಠೆ ಮತ್ತು ನಾಯಕತ್ವವು ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಹೀಗಾಗಿ, ಎಎಪಿ ಪ್ರಭಾವ ಗೊಂದಲದಲ್ಲಿದೆ. ಯಾಕೆಂದರೆ, 2022ರ ಅಸೆಂಬ್ಲಿ ಚುನಾವಣೆಯಲ್ಲಿ ಎಎಪಿ ಭಾರೀ ಬಹುಮತ ಪಡೆದರೂ, ಅದಾದ ಕೆಲವೇ ತಿಂಗಳಲ್ಲಿ ನಡೆದ ಸಂಗ್ರೂರ್‌ಸಂಸತ್ ಉಪಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತು. ಅದು ಎಎಪಿಗೆ ಹಿನ್ನಡೆಯನ್ನು ಉಂಟುಮಾಡಿತ್ತು. ಈ ನಡುವೆ, 2023ರಲ್ಲಿ ನಡೆದ ಜಲಂಧರ್ ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಮಾಧಾನಪಟ್ಟುಕೊಂಡಿದೆ.

ಇದೀಗ, ಪ್ರಚಾರವು ಕೊನೆಯ ಹಂತ ತಲುಪುತ್ತಿರುವ ಸಮಯದಲ್ಲಿ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನದ ಬಗ್ಗೆ ಜನರಿಂದ ಸಹಾನುಭೂತಿ ಗಳಿಸಲು ಪಕ್ಷವು ಯತ್ನಿಸುತ್ತಿದೆ. ಕೇಜ್ರಿವಾಲ್ ಬಂಧನ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಅಂಶಗಳನ್ನು ಮುಂದಿಟ್ಟು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವ ಪ್ರಯತ್ನದಲ್ಲಿದೆ.

ಅದಾಗ್ಯೂ,  2022ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಎಎಪಿ ನೀಡಿದ್ದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಭರವಸೆಯನ್ನು ಈಡೇರಿಸಿಲ್ಲವೆಂದು ರೈತ ಸಂಘಟನೆಗಳು ಪ್ರಶ್ನಿಸುತ್ತಿವೆ. ಹೀಗಾಗಿ, ಬಿಜೆಪಿ ವಿರುದ್ಧವಿರುವ ರೈತ ಹೋರಾಟದ ಅಸಮಾಧಾನದಲ್ಲಿ ಎಎಪಿ ಕೂಡ ಪಾಲು ಪಡೆದುಕೊಂಡಿದೆ. ರೈತರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಜೊತೆಗೆ, ಪಂಜಾಬ್‌ನಲ್ಲಿ ಮಹಿಳೆಯರಿಗೆ ಮಾಸಿಕ ₹1,000 ಪಿಂಚಣಿ ನೀಡುವುದಾಗಿ ಹೇಳಿದ್ದ ಎಎಪಿ, ಆ ಭರವಸೆಯನ್ನೂ ಈಡೇರಿಸಿಲ್ಲ. ಇಂತಹ ವಿವಿಧ ಭರವಸೆಗಳು ಮತ್ತು ಆಡಳಿತ ವೈಫಲ್ಯಗಳ ಬಗ್ಗೆ ವಿರೋಧ ಪಕ್ಷಗಳು ರಾಜ್ಯದಲ್ಲಿ ಎಎಪಿ ಸರ್ಕಾರವನ್ನು ಟೀಕಿಸುತ್ತಿವೆ. ಪ್ರತಿಪಕ್ಷಗಳಿಂದ ಎಎಪಿ ಬಿಸಿ ಎದುರಿಸುತ್ತಿದೆ.

ಪಂಜಾಬ್‌ನಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್, ರಾಜ್ಯದಲ್ಲಿ ಎಎಪಿ ಮತ್ತು ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಂಶವನ್ನು ಬೊಟ್ಟು ಮಾಡಿ ತೋರಿಸುತ್ತಿದೆ. 2021ರಲ್ಲಿ ರದ್ದಾದ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ನಡೆದ ರೈತರ ಆಂದೋಲನಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಅಲ್ಲದೆ, ಇತ್ತೀಚೆಗೆ ಪಂಜಾಬ್-ಹರಿಯಾಣ ಗಡಿಗಳಲ್ಲಿ ನಡೆದ ಎರಡನೇ ಸುತ್ತಿನ ಆಂದೋಲನವನ್ನೂ ಕೈಪಡೆ ಬೆಂಬಲಿಸಿತ್ತು. ಮಾತ್ರವಲ್ಲದೆ, ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ನಾನಾ ಭರವಸೆಗಳನ್ನೂ ನೀಡಿದೆ.

ರೈತರ ಸಾಲವನ್ನು ಮನ್ನಾ, ಎಂಎಸ್‌ಪಿ ಜಾರಿ ಮಾಡುವ ಗ್ಯಾರಂಟಿಗಳನ್ನು ಕಾಂಗ್ರೆಸ್‌ನೀಡಿದೆ. ರೈತ ಪರ ಭರವಸೆಗಳ ಮೇಲೆ 2019ರಲ್ಲಿ ತಾನು ಗಳಿಸಿದ್ದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಹೋರಾಟ ನಡೆಸುತ್ತಿದೆ.

ಇನ್ನು, 2017ರಲ್ಲಿ ಅಧಿಕಾರ ಕಳೆದುಕೊಂಡ ಎಸ್‌ಎಡಿ, ನಂತರ ನಡೆದ ಎರಡು ಚುನಾವಣೆಗಳಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಲೇ ಇದೆ. ಈ ಬಾರಿಯಾದರೂ, ತನ್ನ ನೆಲೆಯನ್ನು ಕೊಂಚವಾದರೂ ಮರಳಿ ಪಡೆಯುವ ಯತ್ನದಲ್ಲಿದೆ. ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಪ್ಯಾಂಥಿಕ್ ಮತ್ತು ‘ಪಂಜಾಬ್ ಪರ’ ನಿಲುವುಗಳನ್ನು ಜನರ ಮುಂದಿಟ್ಟಿದೆ. ರಾಜ್ಯಕ್ಕೆ ರಾಜಕೀಯ ಮತ್ತು ಹಣಕಾಸಿನ ಸ್ವಾಯತ್ತತೆಯೊಂದಿಗೆ ಪ್ರಜಾಪ್ರಭುತ್ವ ಮತ್ತು ಫೆಡರಲ್ ರಚನೆ ಬಗ್ಗೆ ಒತ್ತಿಹೇಳುತ್ತಿದೆ.

ರೈತರನ್ನು ಖಲಿಸ್ತಾನಿಗಳು, ನಕಲಿ ರೈತರು ಎಂದಿದ್ದ ಬಿಜೆಪಿ ಹೋರಾಟದಲ್ಲಿ ಏಕಾಂಗಿಯಾಗಿದೆ. ರೈತ ಆಕ್ರೋಶವನ್ನು ಎದುರಿಸುತ್ತಿದೆ. ಅದಾಗ್ಯೂ, ಸಿಖ್‌ ಮತ್ತು ದಲಿತರನ್ನು ಸೆಳೆಯುವ ಮೂಲಕ ಪಂಜಾಬ್‌ಗೆ ಕಾಲಿಡಲು ಯತ್ನಿಸುತ್ತಿದೆ. ದೇಶದಲ್ಲೇ ಶೇಕಡಾವಾರು ಹೆಚ್ಚು ದಲಿತರನ್ನು ಹೊಂದಿರುವ ರಾಜ್ಯ ಪಂಜಾಬ್‌. ಇಲ್ಲಿ, 32% ದಲಿತರಿದ್ದಾರೆ. ಅವರನ್ನು ಬಿಜೆಪಿಯತ್ತ ಸೆಳೆಯಲು ಕಳೆದ ವಾರ ಪಟಿಯಾಲದಲ್ಲಿ ಮಾತನಾಡಿದ ಮೋದಿ, ಅಂಬೇಡ್ಕರ್‌ಕುರಿತು ಉಲ್ಲೇಖಿಸಿದ್ದಾರೆ.

ತಾನು ಸಿಖ್‌ ಪರವೆಂದು ಇಮೇಜನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಕಾಂಗ್ರೆಸ್‌ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ (ನಿವೃತ್ತ) ಅಮರಿಂದರ್ ಸಿಂಗ್ ಮತ್ತು ಮಾಜಿ ಕಾಂಗ್ರೆಸ್ ನಾಯಕ ರಾಣಾ ಗುರ್ಮಿತ್ ಸಿಂಗ್ ಸೋಧಿ ಸೇರಿದಂತೆ ಹಲವಾರು ಸಿಖ್ಖರನ್ನು ಪಕ್ಷಕ್ಕೆ ಕರೆತಂದಿದೆ. 2014ರಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಿದಾಗಿನಿಂದ ಸಿಖ್ಖರ ಹಿತಾಸಕ್ತಿಗಾಗಿ ತೆಗೆದುಕೊಂಡ ಹಲವಾರು ನಿರ್ಧಾರಗಳ ಕುರಿತು ಬಿಜೆಪಿ ಮತದಾರರ ಎದುರು ಮಾತನಾಡುತ್ತಿದೆ.

ಹಿಂದಿನ ವರ್ಷಗಳಲ್ಲಿ ಎಸ್‌ಎಡಿ ಜೊತೆ ಮೈತ್ರಿಯಲ್ಲಿದ್ದ ಬಿಜೆಪಿ, ರಾಜ್ಯದಲ್ಲಿ ಕಿರಿಯ ಪಾಲುದಾರ ಪಕ್ಷವಾಗಿತ್ತು. ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿತ್ತು. ಈಗ ಮೈತ್ರಿ ಇಲ್ಲದ ಕಾರಣ, ತನ್ನ ನೆಲೆಯನ್ನು ಆಕ್ರಮಣಕಾರಿಯಾಗಿ ವಿಸ್ತರಿಸಿಕೊಳ್ಳಬೇಕೆಂದು ತಂತ್ರ ಎಣೆಯುತ್ತಿದೆ. ಆದರೆ, ರೈತ ಹೋರಾಟದ ಬಿಸಿ, ಬಿಜೆಪಿಗೆ ಪಂಜಾಬ್‌ಪ್ರವೇಶಿಸಲು ಬೃಹತ್ ಗೋಡೆಯಾಗಿ ನಿಂತಿದೆ. ಕಳೆದ ಬಾರಿ ಗೆದ್ದಿದ್ದ 2 ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಿಜೆಪಿ ಸದ್ಯ ಸವಾಲಾಗಿದೆ.

ಪಂಜಾಬ್‌ನ ರಾಜಕೀಯದಲ್ಲಿ ಮೂಲೆಗುಂಪಾಗುತ್ತಿರುವ ಬಿಎಸ್‌ಪಿ, ಕಮೇಣ ತನ್ನ ಮತಗಳನ್ನು ಕಳದುಕೊಳ್ಳುತ್ತಿದೆ. ತಾನೂ ಕೂಡ ಜನ ಬೆಂಬಲ ಪಡೆದು, ಮೇಲೇರಲು ಪರಿಶಿಷ್ಟ ಜಾತಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದೆ.

ಮೇಲ್ನೋಟಕ್ಕೆ ಬಹುಕೋನ ಸ್ಪರ್ಧೆಯಂತೆ ಕಾಣುತ್ತಿರುವ ಪಂಜಾಬ್‌ನಲ್ಲಿ ಪ್ರಮುಖವಾಗಿ ಚತುಷ್ಕೋನ ಸ್ಪರ್ಧೆಯಿದೆ. ಪಂಜಾಬ್‌ನಲ್ಲಿ 2,14,61,739 ಮತದಾರರಿದ್ದು, ಅವರು 13 ಲೋಕಸಭಾ ಸ್ಥಾನಗಳ ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಂಜಾಬ್‌ಯಾರಿಗೆ ಮಣೆ ಹಾಕಲಿದೆ, ಜೂನ್‌4ರಂದು ಗೊತ್ತಾಗಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X