“ಜ್ಞಾನಾರ್ಜನೆಗೆ ಪುಸ್ತಕಗಳ ಓದು ಬಹಳ ಅಗತ್ಯ. ಉಳಿದೆಲ್ಲಾ ಜ್ಞಾನ ಮೂಲಗಳಿಗಿಂತ ಪುಸ್ತಕ ಓದಿನ ಮೂಲದ ಜ್ಞಾನಾರ್ಜನೆ ಬಹಳ ಪರಿಣಾಮಕಾರಿ. ಹಾಗಾಗಿ, ದುಡ್ಡು ಕೊಟ್ಟು ಪುಸ್ತಕ ಖರೀದಿಸಿ ಓದಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ವೀರಲೋಕ ಪ್ರಕಾಶನ ಸಂಸ್ಥೆ ಬೆಂಗಳೂರಿನ ಹೆಚ್ಎಸ್ಆರ್ ಬಡಾವಣೆಯಲ್ಲಿ ಆಯೋಜಿಸಿದ್ದ ಪುಸ್ತಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.
“ಪುಸ್ತಕ ಮತ್ತು ಪತ್ರಿಕೆಗಳನ್ನು ಖರೀದಿಸಿ ಓದುವ ಅಭಿರುಚಿ ಮತ್ತು ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಸಂತೋಷದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ. ದೇಶ ಸುತ್ತು ಕೋಶ ಓದು ಅಂತ ನಾಣ್ಣುಡಿ ಇದೆ. ಜ್ಞಾನದ ಬೆಳವಣಿಗೆ ಆಗಬೇಕಾದರೆ ಪುಸ್ತಕ ಓದಲೇಬೇಕು. ದುಡ್ಡು ಕೊಟ್ಟು ಪುಸ್ತಕ ಖರೀದಿಸಿ ಓದಬೇಕು. ಇನ್ನೊಬ್ಬರು ತೆಗೆದುಕೊಂಡ ಪುಸ್ತಕದಿಂದ ಓದಬಾರದು. ಪತ್ರಿಕೆ ತರ ಓದಬಾರದು” ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ @siddaramaiah ಅವರು ವೀರಲೋಕ ಪ್ರಕಾಶನ ಆಯೋಜಿಸಿದ್ದ ಪುಸ್ತಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.
ಜ್ಞಾನಾರ್ಜನೆಗೆ ಪುಸ್ತಕಗಳ ಓದು ಬಹಳ ಅಗತ್ಯ. ಉಳಿದೆಲ್ಲಾ ಜ್ಞಾನ ಮೂಲಗಳಿಗಿಂತ ಪುಸ್ತಕ ಓದಿನ ಮೂಲದ ಜ್ಞಾನಾರ್ಜನೆ ಬಹಳ ಪರಿಣಾಮಕಾರಿ.
ಪುಸ್ತಕ ಮತ್ತು ಪತ್ರಿಕೆಗಳನ್ನು ಕೊಂಡು ಓದುವ ಅಭಿರುಚಿ ಮತ್ತು ಕಾಳಜಿಯನ್ನು… pic.twitter.com/etVjmSiRkl— CM of Karnataka (@CMofKarnataka) February 10, 2024
ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ, “ರಾಮೇಗೌಡ ಅಂತ ಒಬ್ಬ ಇದ್ದ. ನಾನು ಪೇಪರ್ ಓದಿ ಮುಗಿಸೋದನ್ನೇ ಕಾಯ್ತಾ ಇದ್ದ. ನಂತರ ಅವನೇ ಆ ಪೇಪರ್ ತೆಗೆದುಕೊಂಡು ಹೋಗ್ತಿದ್ದ. ಈಗ ಅವನು ನಿಧನವಾಗಿದ್ದಾನೆ” ಎಂದು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ರಾಮಲಿಂಗಾರೆಡ್ಡಿ, ಲೇಖಕರಾದ ಬರಗೂರು ರಾಮಚಂದ್ರಪ್ಪ, ಮಾಜಿ ಸಂಸದ ಉಗ್ರಪ್ಪ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್ ಸೇರಿ ಹಲವರು ಉಪಸ್ಥಿತರಿದ್ದರು.
ಏಳು ಪುಸ್ತಕ ಖರೀದಿಸಿದ ಸಿಎಂ
ಸಿಎಂ ಸಿದ್ದರಾಮಯ್ಯನವರು ಪುಸ್ತಕ ಸಂತೆಯಲ್ಲಿ ಏಳು ಪುಸ್ತಕಗಳನ್ನು ಖರೀದಿಸಿದರು. ಇದೇ ವೇಳೆ ದುಡ್ಡು ಕೊಟ್ಟು ಪುಸ್ತಕ ಖರೀದಿಸಬೇಕಪ್ಪ ಎಂದು ಉಗ್ರಪ್ಪರಿಗೂ ಸಲಹೆ ನೀಡಿದರು.
ಒಂದು ಸಾವಿರ ರೂ. ಕೊಟ್ಟು ಕರ್ನಾಟಕ ರಾಣಿಯರ ಆಡಳಿತ ನೀತಿ, ಮೂಲಭೂತ ಹಕ್ಕುಗಳು, ಸಂಸದೀಯ ಇತಿಹಾಸ, 1897ರ ಸಾಮಾನ್ಯ ಖಂಡಗಳ ಅಧಿನಿಯಮ, ವಕೀಲೆ ಮತ್ತು ಧರ್ಮವೃತ್ತಿ, ಪ್ರಜಾಪ್ರಭುತ್ವ ಮತ್ತು ಚುನಾವಣೆ ಪದ್ದತಿ ಎಂಬ ಏಳು ಪುಸ್ತಕಗಳನ್ನ ಸಿಎಂ ಖರೀದಿಸಿದರು.
ಎರಡು ದಿನಗಳ ಕಾಲ ನಡೆಯಲಿರುವ ಪುಸ್ತಕ ಸಂತೆ
ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಿರುವ ಪುಸ್ತಕ ಸಂತೆ, ಹೆಚ್ಎಸ್ಆರ್ ಬಡಾವಣೆಯಲ್ಲಿ ನಡೆಯುತ್ತಿದೆ. ಪುಸ್ತಕ ಸಂತೆಯಲ್ಲಿ ಒಟ್ಟು 100ಕ್ಕೂ ಹೆಚ್ಚು ಪುಸ್ತಕಗಳ ಸ್ಟಾಲ್ ಹಾಕಲಾಗಿದೆ. 100ಕ್ಕೂ ಹೆಚ್ಚು ಸಾಹಿತಿಗಳು ಪುಸ್ತಕ ಸಂತೆಯಲ್ಲಿ ಭಾಗಿಯಾಗಿದ್ದಾರೆ.
ಈ ಪುಸ್ತಕ ಸ್ಟಾಲ್ನಲ್ಲಿ 55 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಸಿಗಲಿವೆ. ರಿಯಾಯಿತಿ ದರದಲ್ಲಿ ಪುಸ್ತಕಗಳ ಬೆಲೆ ನಿಗದಿ ಮಾಡಲಾಗಿದೆ. ಪುಸ್ತಕ ಸಂತೆಯಲ್ಲಿ ಪುಡ್ ಸ್ಟಾಲ್ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.