ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಪಕ್ಕಾ ಆಗಿದೆ. ಈ ಹಿನ್ನೆಲೆ, ತೆಲಂಗಾಣದಲ್ಲಿರುವ ಗಾಂಧಿ ಭವನದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಕಾರ್ಯಕರ್ತರು ಸಿಹಿ ಹಂಚಿ, ತಿಂದು ಕುಣಿದು ಕುಪ್ಪಳಿಸುತ್ತಿದ್ದಾರೆ.
ಈ ವೇಳೆ, ಮಾದ್ಯಮದವರೊಂದಿಗೆ ಮಾತನಾಡಿದ ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ, “ಚುನಾವಣೆಗೂ ಮುನ್ನ ತೆಲಂಗಾಣಕ್ಕೆ ನೀಡಿರುವ 6 ಭರವಸೆಗಳನ್ನು ಜಾರಿಗೊಳಿಸುತ್ತೇವೆ. ಪಕ್ಷವನ್ನು ಮುನ್ನಡೆಸಲು ಎಲ್ಲ ಹಿರಿಯರ ಸಹಕಾರವಿದೆ” ಎಂದರು.
“ಮತದಾರರು ಪ್ರಜಾಪ್ರಭುತ್ವ ಮರುಸ್ಥಾಪಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಪ್ರಗತಿ ಭವನವನ್ನು ಅಂಬೇಡ್ಕರ್ ಪ್ರಜಾ ಭವನವನ್ನಾಗಿ ಪರಿವರ್ತಿಸಲಾಗುವುದು. ಸಾಮಾನ್ಯ ಜನರಿಗಾಗಿ ಸೆಕ್ರೆಟರಿಯೇಟ್ ಗೇಟ್ ತೆರೆಯಲಾಗುವುದು. ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ 21 ದಿನಗಳ ಕಾಲ ನಡೆಯಿತು. ಈ ಗೆಲುವು ತೆಲಂಗಾಣದ ಹುತಾತ್ಮರಿಗೆ ಸಮರ್ಪಿಸಲಾಗಿದೆ. ಡಿಸೆಂಬರ್ 3ರ ಇತಿಹಾಸದಲ್ಲಿ ದಾಖಲಾಗಲಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಇಬ್ಬರ ಬಂಧನ
ತೆಲಂಗಾಣದ ಗಾಂಧಿ ಭವನದಲ್ಲಿ ಸಂಭ್ರಮಾಚರಣೆ ನಡೆಯುತ್ತಿದ್ದು, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರೇವಂತ್ ರೆಡ್ಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.