ಹಿಮಾಚಲ ಪ್ರದೇಶ, ಕೇರಳ ಸರ್ಕಾರ ದಿವಾಳಿಯ ದಿಕ್ಕಿನಲ್ಲಿ ಸಾಗುತ್ತಿವೆ. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೂ ದಿವಾಳಿಯತ್ತ ಹೆಜ್ಜೆ ಇಡುತ್ತಿದೆ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ 60 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಮೊದಲು 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದರು. ಈಗ 60 ಪರ್ಸೆಂಟ್ ಕಮಿಷನ್ ಇದೆ. ಮುಂದೆ 65 ಪರ್ಸೆಂಟ್ ಪಡೆಯಬೇಕೆಂದು ಮಂತ್ರಿಮಂಡದಲ್ಲಿ ಚರ್ಚೆ ಆಗುತ್ತಿದೆ ಎಂದರು.
40 X 60 ಸೈಟ್ನಲ್ಲಿ ಮನೆ ಕಟ್ಟಲು 20 ಲಕ್ಷ ರೂಪಾಯಿ ಕೊಡಬೇಕು. ಕಳೆದ 6 ತಿಂಗಳಿನಿಂದ ಕಾಂಗ್ರೆಸ್ ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್ ಇದೆ. ಹಿಂದೆ ನಮ್ಮ ವಿರುದ್ಧ 40 ಪರ್ಸೆಂಟ್ ಕಮಿಷನ್ ಎಂದು ಫೋಟೋ ಹಿಡಿಸಿದ್ದರು. ಅದೇ ಗುತ್ತಿಗೆದಾರರಿಂದ ಈಗ 40 ಪರ್ಸೆಂಟ್ಗಿಂತ ಹೆಚ್ಚು ಕಮಿಷನ್ ಪೀಕುತ್ತಿದ್ದಾರೆ. ಅಂದಾಜು 32 ಸಾವಿರ ಕೋಟಿ ರೂ. ಸರ್ಕಾರದಿಂದ ಬರಬೇಕಿದೆ. ಸರ್ಕಾರ ಈಗ ಮತ್ತೆ ತೆರಿಗೆಗಳನ್ನು ಹಾಕಬೇಕು ಅಷ್ಟೇ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಕಮಿಷನ್ಗಾಗಿ ಕಾಂಗ್ರೆಸ್ ಸರ್ಕಾರ ಇಡೀ ರಾಜ್ಯವನ್ನೇ ಕತ್ತಲೆಗೆ ದೂಡುತ್ತಿದೆ. ಅಭಿವೃದ್ಧಿ ಕುಂಠಿತ ಆಗಿದೆ ಆದರೆ ಕಾಂಗ್ರೆಸ್‌ನವರು ಮಾತ್ರ ಅಭಿವೃದ್ಧಿ ಆಗುತ್ತಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿಕೆ ಅಪಾಯಕಾರಿ
ಕಮಿಷನ್ ಪ್ರಮಾಣವನ್ನು ಶೇ 5 ರಷ್ಟು ಹೆಚ್ಚು ಮಾಡಲು ಕಾಂಗ್ರೆಸ್ ಹೊರಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಮಿಷನ್ ಹೆಚ್ಚಾಗಲಿದೆ. ಗುತ್ತಿಗೆದಾರರು ಆತ್ಮಹತ್ಯೆಗೆ ಅರ್ಜಿ ಹಾಕಿಕೊಳ್ಳುವ ಕಾಲ ಬಂದಿದೆ. ರಾಜ್ಯಪಾಲರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ದಾಖಲೆ ಇದೆಯಾ ಎಂದು ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಈ ಹಿಂದೆ 40 ಪರ್ಸೆಂಟ್ ಆರೋಪಕ್ಕೆ ದಾಖಲೆ ಕೊಟ್ಟಿದ್ದಿರಾ? ಇದ್ಯಾವ ನ್ಯಾಯ? ಇದು 60 ಪರ್ಸೆಂಟ್ ಲೂಟಿಯ ಸರ್ಕಾರ. ಕುಮಾರಸ್ವಾಮಿ ಹೇಳಿಕೆಯನ್ನ ಸಮರ್ಥನೆ ಮಾಡುತ್ತೇನೆ ಎಂದು ಅಶೋಕ್ ಹೇಳಿದರು.
ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. ಬಿಜೆಪಿಗಿಂತ ಹೆಚ್ಚು ಅಭಿವೃದ್ಧಿ ಮಾಡಿದ್ದೇವೆ. ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಹೆಚ್ಚು ಅನುದಾನ ಕೊಟ್ಟಿರುವುದಾಗಿ ಹೇಳಿದ್ದಾರೆ. ಗಂಗಾ ಕಲ್ಯಾಣದಲ್ಲಿ ಬಿಜೆಪಿ 60 ಕೋಟಿ ರೂ. ಕೊಟ್ಟಿತ್ತು. ಈಗ 80 ಕೋಟಿ ರೂ. ಆಗಬೇಕು. ಆದರೆ, ಅವರು ಕೊಟ್ಟಿದ್ದು ಕೇವಲ 40 ಕೋಟಿ ರೂ. ಅಷ್ಟೆ ಎಂದು ಅಶೋಕ್ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಸ್ವಯಂ ಉದ್ಯೋಗ ಯೋಜನೆಗೆ ನಮ್ಮ ಸರ್ಕಾರ ಇದ್ದಾಗ 100 ಕೋಟಿ ರೂ. ಕೊಟ್ಟಿದ್ದೆವು. ಕಾಂಗ್ರೆಸ್ ಅದನ್ನ 45 ಕೋಟಿ ರೂ.ಗೆ ಇಳಿಸಿದೆ. ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ನಾವು ಕೊಟ್ಟಿದ್ದು 100 ಕೋಟಿ ರೂ., ಅವರು ಕೊಟ್ಟಿದ್ದು 40 ಕೋಟಿ ರೂ. ದಲಿತರ ಬಗ್ಗೆ ಇರುವ ಪ್ರೀತಿ ಇದುವೆಯಾ ಸಿದ್ದರಾಮಯ್ಯನವರೇ ಎಂದು ಅಶೋಕ್ ಪ್ರಶ್ನಿಸಿದರು.

ತಮ್ಮ ಪಕ್ಷದಲ್ಲೇ ಕಾಂಪೀಟೇಶನ್ ಇದೆ,, ಪ್ರಚಾರಕ್ಕೆ ಕಂಡದ್ದನ್ನು ಎಲ್ಲಾ ವಿರೋಧ ಮಾಡುವ ಇರೋಧ ನಾಯಕ,, ಕೇಂದ್ರದ ಹಣಕಾಸು ಸ್ಥಿತಿಗತಿ ಬಗ್ಗೆ.ಹಲವಾರು ವರದಿಗಳಿವೆ ಓದಿ ಒಂಚೂರು ಜ್ಞಾನ ಪಡೆದರೆ ಮೈಕ್ ಮುಂದೆ ಮಾತಾಡಲು ಅನುಕೂಲ ಆಗಬಹುದು,,, ಅಲ್ಲದೆ ಕೇಂದ್ರದ ತೆರಿಗೆ ಪಾಲಿನ ತಾರತಮ್ಯದಿಂದ ರಾಜ್ಯದ ತೆರಿಗೆದಾರರಿಗೆ ಅನ್ಯಾಯ ಆಗುತ್ತಿದೆ ಅದನ್ನು ಕೇಳುವ ಧೈರ್ಯ ತೋರಿಸಬೇಕು ಅಲ್ವಾ,, ಅದನ್ನು ಮರೆಮಾಚಲು ಕಥೆಗಳನ್ನು ಸೃಷ್ಟಿ ಮಾಡುವುದು ಜನರಿಗೆ ಮೋಸ ಮಾಡಿದಂತೆ ಅಲ್ವಾ,, ಅದಕ್ಕೆ ಅಲ್ವೆ ನಿಮ್ಮನ್ನು ಹೀನಾಯವಾಗಿ ಸೋಲಿಸಿದರು