ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನೀಡುವ ನೋಟಿಸ್‌ಗೆ ನಾವು ಯಾವುದೇ ಬೆಲೆ ನೀಡಲ್ಲ. ವಕ್ಫ್ ಮಂಡಳಿ ಮಾಡುತ್ತಿರುವ ಭೂ ಕಬಳಿಕೆಯ ವಿರುದ್ಧ ನಾವು ನಿರಂತರ ಹೋರಾಟ ಮಾಡುತ್ತೇವೆ, ನಮ್ಮ ಹೋರಾಟ ನಿಲ್ಲದು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಮಂಡ್ಯ ಜಿಲ್ಲೆಯ ಚಂದ್ಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿದ ಆರ್ ಅಶೋಕ್, “ವಿಪಕ್ಷ ನಾಯಕನಾಗಿ ಎಲ್ಲಿ ಬೇಕಾದರೂ ಓಡಾಡುವ ಅಧಿಕಾರ ನನಗಿದೆ. ಅದಕ್ಕಾಗಿ ವಕ್ಫ್ ಭೂಮಿ ಕಬಳಿಸಿದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ” ಎಂದು ತಿಳಿಸಿದರು.
“ಚಂದ್ಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ಶಾಲೆ ಕಣ್ಣ ಮುಂದೆ ಇದ್ದರೂ ಪಹಣಿಯಲ್ಲಿ ಖಬರಸ್ಥಾನ ಎಂದಿದೆ. ಇದು ಹೆಣ ಹೂಳುವ ಜಾಗವೇ ಎಂಬುದನ್ನು ಗ್ರಾಮಸ್ಥರೇ ಹೇಳಬೇಕು. ನಮ್ಮ ಶಾಲೆ ನಮ್ಮ ಹಕ್ಕು ಎಂಬ ಘೋಷಣೆಯಡಿ ಹೋರಾಟ ನಡೆಸಬೇಕು” ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ವಿಪಕ್ಷ ನಾಯಕ ಆರ್ ಅಶೋಕ್ ಅವರ ಭೂ ವಂಚನೆ ಹಗರಣ ಬಿಚ್ಚಿಟ್ಟ ಕಾಂಗ್ರೆಸ್ ಸಚಿವರು
“ಯಾವುದೇ ಜಮೀನಿನ ತಕರಾರು ಇದ್ದರೂ ಜಿಲ್ಲಾಧಿಕಾರಿಗೆ ಅರ್ಜಿ ನೀಡಬೇಕು. ಆದರೆ ವಕ್ಫ್‌ಗೆ ಸಂಬಂಧಿಸಿದ ಜಮೀನು ವಿವಾದ ಬಂದರೆ ಅದನ್ನು ವಕ್ಫ್‌ನಲ್ಲೇ ಬಗೆಹರಿಸಬೇಕೆಂದು ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಾನೂನು ತಿದ್ದುಪಡಿ ಮಾಡಿದೆ. ಇದರಿಂದಾಗಿ ಜನರ ಜಮೀನು ಕಬಳಿಕೆಯಾಗುತ್ತಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳ ಆಸ್ತಿ ಮುಜರಾಯಿ ಇಲಾಖೆಯಡಿ ಬಂದು ಸರ್ಕಾರಿ ಆಸ್ತಿಯಾಗುತ್ತದೆ. ಆದರೆ ಮುಸ್ಲಿಂ ಸಂಸ್ಥೆಗಳ ಆಸ್ತಿ ಮಾತ್ರ ವಕ್ಫ್ ಅಡಿ ಬರುತ್ತದೆ” ಎಂದು ದೂರಿದರು.
“ರಾಜ್ಯದ ಪ್ರತಿಯೊಬ್ಬರೂ ಪಹಣಿಯಲ್ಲಿ ಪರಿಶೀಲಿಸಬೇಕು. ಅದರಲ್ಲಿ ವಕ್ಫ್ ಎಂದು ಇದ್ದರೆ, ನನಗೆ ತಿಳಿಸಿದರೆ ಬಂದು ಹೋರಾಟ ಮಾಡುತ್ತೇನೆ” ಎಂದು ತಿಳಿಸಿದರು.
ಇದೇ ವೇಳೆ ಮಹದೇವಪುರದ ಚಿಕ್ಕಮ್ಮ ದೇವಸ್ಥಾನಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು. “ನಮ್ಮ ಶಾಲೆ ನಮ್ಮ ಹಕ್ಕು, ನಮ್ಮ ದೇವಸ್ಥಾನ ನಮ್ಮ ಹಕ್ಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಭೂ ಕಬಳಿಕೆಯ ಕ್ಯಾನ್ಸರ್ ತಡೆಗಟ್ಟದಿದ್ದರೆ ರೈತರು, ದಲಿತರ ಜಮೀನು ಉಳಿಯುವುದಿಲ್ಲ. ಸ್ವಾತಂತ್ರ್ಯ ಚಳವಳಿ ಮಾಡಿದಂತೆಯೇ ಈಗ ನಾವು ಹೋರಾಟ ಮಾಡಿ ವಕ್ಫ್ ಬೋರ್ಡ್ ರದ್ದು ಮಾಡಬೇಕಿದೆ” ಎಂದು ಸುದ್ದಿಗಾರರಿಗೆ ಹೇಳಿದರು.
