ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಪೆರಿಯಾರ್, ಸಾಮಾಜಿಕ ನ್ಯಾಯ ಸಿದ್ಧಾಂತ ಮತ್ತು ಆರ್‌ಎಸ್‌ಎಸ್, ಮೋದಿ ನಡುವಿನ ಯುದ್ಧ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ತಮಿಳುನಾಡಿನ ತುರುನಲ್ವೆಯಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ವಿರುದ್ಧ ಕುಟುವಾಗಿ ವಾಗ್ದಾಳಿ ನಡೆಸಿದರು. “ತಮಿಳು ಭಾಷೆಯ ಮೇಲಿನ ದಾಳಿಯು ತಮಿಳು ಜನರ ಮೇಲಿನ ದಾಳಿಯಾಗಿದೆ” ಎಂದು ಅವರು ಹೇಳಿದರು.
“ಇಂದು ಭಾರತದಲ್ಲಿ ಸೈದ್ಧಾಂತಿಕ ಕದನ ನಡೆಯುತ್ತಿದೆ. ಒಂದೆಡೆ ಪೆರಿಯಾರ್, ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ವಿಚಾರಗಳು, ಇನ್ನೊಂದೆಡೆ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿಚಾರಗಳಿವೆ. ‘ಒಂದು ರಾಷ್ಟ್ರ, ಒಂದು ನಾಯಕ, ಒಂದು ಭಾಷೆ’ ಎಂದು ಮೋದಿ ಹೇಳುತ್ತಾರೆ. ತಮಿಳು ಭಾಷೆ ಯಾವುದೇ ಭಾರತೀಯ ಭಾಷೆಗಿಂತ ಕಡಿಮೆಯಿಲ್ಲ. ಈ ದೇಶದಲ್ಲಿ ಹಲವಾರು ವಿಭಿನ್ನ ಭಾಷೆಗಳು ಮತ್ತು ಸಂಸ್ಕೃತಿಗಳಿವೆ. ನಮಗೆ ಎಲ್ಲವೂ ಸಮಾನವಾಗಿದ್ದು, ಮುಖ್ಯವಾಗಿವೆ” ಎಂದು ರಾಹುಲ್ ಪ್ರತಿಪಾದಿಸಿದ್ದಾರೆ.
“ಕೇಂದ್ರೀಯ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಮೋದಿ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಜಾರಿ ನಿರ್ದೇಶನಾಲಯ, ಸಿಬಿಐ, ಐಟಿ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಚುನಾವಣಾ ಆಯುಕ್ತರನ್ನು ಪ್ರಧಾನಿ ಆಯ್ಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಚುನಾವಣೆಗೆ ಎರಡು ತಿಂಗಳ ಮುಂಚೆ ಸ್ಥಗಿತಗೊಳಿಸಲಾಗಿದೆ. ಮುಖ್ಯಮಂತ್ರಿಗಳನ್ನು ಬಂಧಿಸಲಾಗಿದೆ, ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕಲಾಗುತ್ತಿದೆ’’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. .
“ದೇಶದ 3-4 ಶ್ರೀಮಂತರು ಸರ್ಕಾರದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ, ಪ್ರವಾಹ ಪರಿಹಾರಕ್ಕಾಗಿ ಹಣವನ್ನು ಕೇಳಿದರೆ ಕೇಂದ್ರ ಸರ್ಕಾರ ನಿರಾಕರಿಸುತ್ತದೆ. ಪ್ರಧಾನಿ ಈ ದೇಶದ ಮೀನುಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಅವರ ಬಗ್ಗೆ ಮೋದಿ ಯೋಚಿಸುವುದಿಲ್ಲ. ನಾವು ಮೀನುಗಾರರಿಗೆ ವಿಶೇಷ ಪ್ರಣಾಳಿಕೆ ರಚಿಸಿದ್ದೇವೆ. ಮೀನುಗಾರಿಕಾ ದೋಣಿಗಳಿಗೆ ಡೀಸೆಲ್‌ಗೆ ಸಬ್ಸಿಡಿ, ಮೀನುಗಾರಿಕಾ ದೋಣಿಗಳಿಗೆ ವಿಮೆ, ಕ್ರೆಡಿಟ್ ಕಾರ್ಡ್ ನೀಡುತ್ತೇವೆ. ಒಳನಾಡು ಮೀನುಗಾರಿಕೆ ಮತ್ತು ಜಲಚರಗಳನ್ನು ಕೃಷಿ ಎಂದು ಗುರುತಿಸಲು ಕಾಂಗ್ರೆಸ್ ಹೊರಟಿದೆ” ಎಂದು ವಿವರಿಸಿದ್ದಾರೆ.
“ಮೋದಿ ಸರ್ಕಾರವು ಸಂವಿಧಾನವನ್ನು ಬದಲಾಯಿಸಲು ಯೋಜಿಸುತ್ತಿದೆ. ಬಿಜೆಪಿ ಸಂಸದರು ತಾವು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಾರೆ. ಪ್ರಪಂಚದ ಉಳಿದ ರಾಷ್ಟ್ರಗಳು ಭಾರತವನ್ನು ಪ್ರಜಾಪ್ರಭುತ್ವದ ದಾರಿದೀಪ ಎಂದು ಕರೆಯುತ್ತಿದ್ದವು; ಈಗ ಅವರೆಲ್ಲರೂ ಭಾರತದ ಪ್ರಜಾಪ್ರಭುತ್ವವು ಇನ್ನು ಮುಂದೆ ಪ್ರಜಾಪ್ರಭುತ್ವವಲ್ಲ ಎಂದು ಹೇಳುವ ಪರಿಸ್ಥಿತಿ ಎದುರಾಗಿದೆ” ಎಂದು ರಾಹುಲ್ ಹೇಳಿದ್ದಾರೆ.
ತಮಿಳುನಾಡು 39 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಏಪ್ರಿಲ್ 19ರಂದು ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ತಮಿಳುನಾಡಿನ 9 ಸ್ಥಾನಗಳು ಹಾಗೂ ಪುದುಚೇರಿಯ ಏಕೈಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.