ಕೇಂದ್ರ ಸರ್ಕಾರ ಮಂಡಿಸಿರುವ 2024ನೇ ಸಾಲಿನ ಬಜೆಟ್‌ಅನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕೇಂದ್ರದ ಬಜೆಟ್ ‘ಕುರ್ಚಿ ಉಳಿಸುವ’ ಹಾಗೂ ಬಿಜೆಪಿ ಮೈತ್ರಿಕೂಟದ ‘ಮಿತ್ರರನ್ನು ಸಮಾಧಾನಪಡಿಸುವ” ಬಜೆಟ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್‌ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ‘ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಆಗಿದೆ. ಮೈತ್ರಿ ಪಕ್ಷದವರನ್ನು ಸಮಾಧಾನಪಡಿಸಿ ಇತರ ರಾಜ್ಯದವರಿಗೆ ಪೊಳ್ಳು ಭರವಸೆಗಳನ್ನು ನೀಡುವುದಾಗಿದೆ. ತಮ್ಮ ಶ್ರೀಮಂತ ಉದ್ಯಮಿಗಳನ್ನು ಸಮಾಧಾನಪಡಿಸಿ ಭಾರತದ ಸಾಮಾನ್ಯ ಜನರಿಗೆ ಯಾವುದೇ ಉಪಯೋಗವಾಗದ ಬಜೆಟ್. ಕಾಂಗ್ರೆಸ್‌ನ ಪ್ರಣಾಳಿಕೆ ಹಾಗೂ ಹಿಂದಿನ ಆಯವ್ಯಯಗಳ ಕಾಪಿ ಪೇಸ್ಟ್ ಬಜೆಟ್’ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್‌ನ 2024ರ ಚುನಾವಣೆಯ ಪ್ರಣಾಳಿಕೆ ಹಾಗೂ ಹಿಂದಿನ ಬಜೆಟ್‌ಗಳ ಕಾಪಿ ಪೇಸ್ಟ್ ಬಜೆಟ್ ಆಗಿದೆ ಎಂದು ರಾಹುಲ್ ಹಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಎನ್‌ಡಿಎ ಸರ್ಕಾರದ ಬಜೆಟ್‌ಅನ್ನು ವಿರೋಧಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಇನ್ಮುಂದೆ ಯಾವುದು ಅಗ್ಗ? ಯಾವುದು ದುಬಾರಿ?
“ಮೋದಿ ಸರ್ಕಾರಕ್ಕೆ ‘ಕಾಪಿಕ್ಯಾಟ್ ಬಜೆಟ್’ ಮೂಲಕ ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಸರಿಯಾಗಿ ನಕಲಿಸಲು ಸಾಧ್ಯವಾಗಲಿಲ್ಲ. ಎನ್‌ಡಿಎ ಸರ್ಕಾರ ಉಳಿಸಿಕೊಳ್ಳಲು ಮೋದಿ ಸರ್ಕಾರವು ಬಜೆಟ್ ಮೂಲಕ ತನ್ನ ಮಿತ್ರ ಪಕ್ಷಗಳನ್ನು ವಂಚಿಸುತ್ತಿದೆ. ಇದು ದೇಶದ ಪ್ರಗತಿಗಾಗಿ ಅಲ್ಲ, ಮೋದಿ ಸರ್ಕಾರ ಉಳಿಸುವ ಬಜೆಟ್” ಎಂದು ಟೀಕಿಸಿದ್ದಾರೆ.
“ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸಮಸ್ಯೆಯನ್ನು ಎದುರಿಸುತ್ತಿರುವ ಯುವಜನರಿಗೆ ಹತ್ತು ವರ್ಷಗಳ ನಂತರ ಸೀಮಿತ ಘೋಷಣೆಗಳನ್ನು ಮಾಡಲಾಗಿದೆ. ರೈತರ ಬಗ್ಗೆ ಕೇವಲ ಮೇಲ್ನೋಟದ ಮಾತುಗಳಿದೆ. ಒಂದೂವರೆ ಪಟ್ಟು ಎಂಎಸ್‌ಪಿ, ಆದಾಯವನ್ನು ದ್ವಿಗುಣಗೊಳಿಸುವುದು ಮೊದಲಾದವುಗಳು. ಎಲ್ಲವೂ ಚುನಾವಣಾ ವಂಚನೆಯಾಗಿದೆ. ಈ ಸರ್ಕಾರಕ್ಕೆ ಗ್ರಾಮೀಣ ವೇತನ ಹೆಚ್ಚಿಸುವ ಯಾವುದೇ ಇರಾದೆ ಇಲ್ಲ” ಎಂದು ಆರೋಪಿಸಿದರು.
“ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಧ್ಯಮ ವರ್ಗ ಮತ್ತು ಗ್ರಾಮೀಣ ಬಡವರಿಗೆ ಕಾಂಗ್ರೆಸ್-ಯುಪಿಎ ಜಾರಿಗೆ ತಂದಂತಹ ಕ್ರಾಂತಿಕಾರಿ ಯೋಜನೆ ಇಲ್ಲ. ಬದಲಾಗಿ ‘ಬಡವರು’ ಎಂಬ ಪದವು ತನ್ನನ್ನು ತಾನು ಬ್ರಾಂಡ್ ಮಾಡಿಕೊಳ್ಳುವ ಸಾಧನವಾಗಿ ಮಾರ್ಪಟ್ಟಿದೆ” ಎಂದು ಟೀಕಿಸಿದರು.