2004ರಿಂದ 2014ರ ನಡುವೆ ಯಾವಾಗ ಬೇಕಾದರೂ ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು, ಆದರೆ ಅವರಿಗೆ ಹುದ್ದೆಗಳು ಮತ್ತು ಸ್ಥಾನಗಳು ಮುಖ್ಯವಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸೋಮವಾರ ಹೇಳಿದ್ದಾರೆ.
ತೆಲಂಗಾಣದ ಗಾಂಧಿ ಭವನದಲ್ಲಿ ನಡೆದ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ 75ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ರೆಡ್ಡಿ, ” ವೈಎಸ್ಆರ್ ಅವರು ತಮ್ಮ ಆಡಳಿತದ ಅವಧಿಯಲ್ಲಿ ಪರಿಚಯಿಸಿದ ಕಲ್ಯಾಣ ಕಾರ್ಯಕ್ರಮಗಳು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ ‘ಆರು ಭರವಸೆಗಳಿಗೆ’ ಸ್ಫೂರ್ತಿಯಾಗಿದೆ” ಎಂದು ಹೇಳಿದರು.
“2009ರಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ವೈಎಸ್‌ಆರ್ ಅವರು ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗುತ್ತಾರೆ ಎಂದು ಹೇಳಿದ ಮಾತು ನನಗೆ ನೆನಪಿದೆ. ರಾಹುಲ್ ಆ ಹುದ್ದೆಗೆ ಏರುವ ಮುನ್ನವೇ ವೈಎಸ್ ಆರ್ ನಮ್ಮನ್ನು ಅಗಲಿದರು. ಅವರನ್ನು ಪ್ರಧಾನಿ ಮಾಡಲು ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು” ಎಂದರು.
“ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾದ ವೈಎಸ್ಆರ್ ಅವರ ಪಾದಯಾತ್ರೆಯು ರಾಹುಲ್ ಅವರ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲು ಪ್ರಭಾವ ಬೀರಿತು” ಎಂದು ರೆಡ್ಡಿ ಹೇಳಿದರು.
ಇದನ್ನು ಓದಿದ್ದೀರಾ? 75ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯಲು ಸಿದ್ಧವೇ: ಮೋದಿಗೆ ರೇವಂತ್ ರೆಡ್ಡಿ ಪ್ರಶ್ನೆ
“ತೆಲಂಗಾಣ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯೇ ನೆರವಾಗಿದೆ. ಈಗ ರಾಹುಲ್ ಅವರನ್ನು ಪ್ರಧಾನಿ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು” ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
“ರಾಹುಲ್ ಗಾಂಧಿ ಈಗಾಗಲೇ ವಿರೋಧ ಪಕ್ಷದ ನಾಯಕರಾಗಿ ಶ್ರಮಿಸುತ್ತಿದ್ದಾರೆ. ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ. ಅವರ ನಾಯಕತ್ವದಲ್ಲಿ ಮಾತ್ರ ದೇಶ ಅಭಿವೃದ್ಧಿಯಾಗಲಿದೆ” ಎಂದು ಅಭಿಪ್ರಾಯಿಸಿದರು.
“ರಾಹುಲ್ ಗಾಂಧಿ ಅವರಿಗೆ ಹುದ್ದೆ ಮತ್ತು ಸ್ಥಾನಗಳು ಮುಖ್ಯವಲ್ಲ. ಅವರು 2004 ಮತ್ತು 2014ರ ನಡುವೆ ಯಾವಾಗ ಬೇಕಾದರೂ ಪ್ರಧಾನಿಯಾಗಬಹುದಿತ್ತು. ರಾಹುಲ್‌ರನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡಲು ಶ್ರಮಿಸುವವರು ವೈಎಸ್‌ಆರ್‌ನ ನಿಜವಾದ ಬೆಂಬಲಿಗರು. ನಾನು ಎಲ್ಲಾ ವೈಎಸ್‌ಆರ್ ಅಭಿಮಾನಿಗಳಿಗೆ ಕಾಂಗ್ರೆಸ್ ಸೇರುವಂತೆ ಮನವಿ ಮಾಡುತ್ತೇನೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ₹3 ಕೋಟಿ ಬೆಲೆಯ 22 ಕಾರು ಖರೀದಿಸಿ ಅಡಗಿಸಿಟ್ಟಿದ್ದ ಕೆಸಿಆರ್: ರೇವಂತ್ ರೆಡ್ಡಿ
ವೈಎಸ್ಆರ್ 2004 ಮತ್ತು 2009 ರ ನಡುವೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅಧಿಕಾರಕ್ಕೆ ಮರಳಿದ ಮೂರು ತಿಂಗಳ ನಂತರ ಅವರು ಸೆಪ್ಟೆಂಬರ್ 2009ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
ಇನ್ನು ಕಳೆದ ವರ್ಷವೂ, ತೆಲಂಗಾಣ ಕಾಂಗ್ರೆಸ್, ನವೆಂಬರ್‌ನಲ್ಲಿ ಅಧಿಕಾರಕ್ಕೆ ಬರುವ ಮೊದಲು, ವೈಎಸ್‌ಆರ್ ಅವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಿತ್ತು. ಇದು ಇತರ ಪಕ್ಷಗಳ ವೈಎಸ್‌ಆರ್ ಬೆಂಬಲಿಗರನ್ನು, ವಿಶೇಷವಾಗಿ ಭಾರತ್ ರಾಷ್ಟ್ರ ಸಮಿತಿಯಲ್ಲಿರುವ (ಬಿಆರ್‌ಎಸ್) ಅನ್ನು ಸೆಳೆಯುವ ಪ್ರಯತ್ನವಾಗಿದೆ.