ಮೋದಿ ಸರ್‌ನೇಮ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ತೀರ್ಪನ್ನು ಏಪ್ರಿಲ್ 20ಕ್ಕೆ ಕಾಯ್ದಿರಿಸಿದ್ದಾರೆ.
ಮೋದಿ ಸರ್‌ನೇಮ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ಎರಡು ವರ್ಷಗಳ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ವಕೀಲರು, ಗುರುವಾರ (ಏಪ್ರಿಲ್ 13) ಗುಜರಾತ್‌ನ ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ನ್ಯಾಯಾಲಯ ಪ್ರಕರಣದ ತೀರ್ಪನ್ನು ಏಪ್ರಿಲ್ 20ಕ್ಕೆ ಕಾಯ್ದಿರಿಸಿದೆ.
“ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಗರಿಷ್ಠ ಶಿಕ್ಷೆ ನೀಡಿರುವುದು ನ್ಯಾಯಯುತವಲ್ಲ” ಎಂದು ವಕೀಲರು ವಾದಿಸಿದ್ದಾರೆ. ಒಟ್ಟು ಗುಜರಾತಿ ಸಮುದಾಯವೇ ಆರು ಕೋಟಿಯಾಗಿರುವಾಗ ಅರ್ಜಿದಾರರು 13 ಕೋಟಿ ಮಂದಿಗೆ ‘ಮೋದಿ ಸರ್‌ನೇಮ್’ ಟೀಕೆಯಿಂದ ಅವಹೇಳನವಾಗಿದೆ ಎಂದು ಹೇಳುತ್ತಿರುವ ತರ್ಕವನ್ನು ರಾಹುಲ್ ಪರ ವಕೀಲರು ಪ್ರಶ್ನಿಸಿದ್ದಾರೆ.
ದೂರು ದಾಖಲಿಸಿರುವ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡುವುದನ್ನು ವಿರೋಧಿಸಿದ್ದಾರೆ. ಮೋದಿ ಪರ ವಕೀಲರು, “ರಾಹುಲ್ ಗಾಂಧಿ ಅವರು ‘ಪದೇ ಪದೇ ತಪ್ಪು ಎಸಗುವವ’ ಮತ್ತು “ಅವಹೇಳನಕಾರಿ ಹೇಳಿಕೆ ನೀಡುವ ಅಭ್ಯಾಸ ಹೊಂದಿದವರು” ಎಂದು ಧೂಷಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಬಿನ್ ಪಿ ಮೊಗೆರಾ ಸಮ್ಮುಖದಲ್ಲಿ ಎರಡೂ ಪಕ್ಷದವರು ವಾದ ಮಂಡಿಸಿದ್ದಾರೆ.
ರಾಹುಲ್ ಗಾಂಧಿ ಪರ ಹಿರಿಯ ವಕೀಲರಾದ ಆರ್ ಎಸ್ ಛೀಮಾ ಅವರು, “ವಿಚಾರಣೆ ನ್ಯಾಯಯುತವಾಗಿರಲಿಲ್ಲ” ಎಂದು ಹೇಳಿದ್ದಾರೆ. “ವಿಚಾರಣಾ ನ್ಯಾಯಾಧೀಶರು ತಮ್ಮ ಮುಂದಿದ್ದ ಎಲ್ಲಾ ಸಾಕ್ಷ್ಯಗಳನ್ನು ಅಲಕ್ಷಿಸಿದ್ದಾರೆ. ಅದು ನ್ಯಾಯಯುತ ವಿಚಾರಣೆ ಆಗಿರಲಿಲ್ಲ. ಸಂಪೂರ್ಣ ಪ್ರಕರಣವನ್ನು ತಾಂತ್ರಿಕ ಸಾಕ್ಷ್ಯವನ್ನು ಗಮನಿಸಿ ವಿಚಾರಣೆ ಮಾಡಲಾಗಿದೆ. ನಾನು ಭಾಷಣ ಮಾಡಿದರೆ, ನೂರಾರು ಕಿಮೀ ದೂರದಲ್ಲಿರುವ ವ್ಯಕ್ತಿ ಸುದ್ದಿವಾಹಿನಿಯಲ್ಲಿ ನೋಡಿ ದೂರು ಸಲ್ಲಿಸುತ್ತಾನೆ. ಇಂತಹ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆಯ ಅಗತ್ಯವಿಲ್ಲ” ಎಂದು ಛೀಮಾ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸತ್ಯಕಿ ಸಾವರ್ಕರ್
“ರಫೇಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ಬೇಷರತ್ ಕ್ಷಮೆ ಯಾಚಿಸಿರುವುದನ್ನು ಅನಗತ್ಯವಾಗಿ ಈ ಪ್ರಕರಣಕ್ಕೆ ಜೋಡಿಸಲಾಗಿದೆ” ಎಂದು ಛೀಮಾ ವಾದಿಸಿದ್ದಾರೆ.
ಪೂರ್ಣೇಶ್ ಮೋದಿ ಪರ ವಾದಿಸಿದ ವಕೀಲ ಹರ್ಷಿತ್ ತೊಲಿಯ, “ರಾಹುಲ್ ಗಾಂಧಿ ಅವರು ಮೋದಿ ಸರ್‌ನೇಮ್ ಇರುವ ಎಲ್ಲರಿಗೂ ಅವಹೇಳನ ಮಾಡಿರುವುದನ್ನು ದೂರುದಾರರು ಆಕ್ಷೇಪಿಸುತ್ತಿದ್ದಾರೆ” ಎಂದು ಹೇಳಿದರು.
“ದೇಶದ ಎರಡನೇ ಅತಿದೊಡ್ಡ ಪಕ್ಷದ ಅಧ್ಯಕ್ಷರಾಗಿದ್ದಾಗ ಅವರು ಮೋದಿ ಸರ್‌ನೇಮ್ ಬಗ್ಗೆ ಟೀಕಿಸಿದ್ದಾರೆ. ಜನರ ನಡುವೆ ಮಾಡಿರುವ ಅಂತಹ ಭಾವೋದ್ರೇಕದ ಭಾಷಣದಿಂದ ಸಮುದಾಯಕ್ಕೆ ಅವಹೇಳನವಾಗಿದೆ. ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ತೆಗೆದು ಅವರು ಸುಮ್ಮನಾಗಲಿಲ್ಲ. ಎಲ್ಲಾ ಕಳ್ಳರ ಹೆಸರು ಏಕೆ ಮೋದಿ ಎಂದಿದೆ’ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಅರ್ಜಿದಾರರಿಗೆ ನೋವಾಗಿದೆ, ಅದಕ್ಕಾಗಿ ದೂರು ನೀಡಿದ್ದಾರೆ” ಎಂದು ಹರ್ಷಿತ್ ವಾದಿಸಿದರು.
ರಾಹುಲ್ ಗಾಂಧಿ ತಮ್ಮ ಭಾಷಣಕ್ಕೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ ಎನ್ನುವುದನ್ನೂ ಹರ್ಷಿತ್ ಸೂರತ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.