ಚುನಾವಣಾ ಬಾಂಡ್ ವಿಚಾರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಿಲುವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಸ್‌ಬಿಐ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
“ಮಾಹಿತಿಯನ್ನು ಹಂಚಿಕೊಳ್ಳಲು ಹಿಂಜರಿಯುತ್ತಿರುವ ಎಸ್‌ಬಿಐ, ಪ್ರಧಾನಿ ನರೇಂದ್ರ ಮೋದಿಯವರ ನಿಜವಾದ ಮುಖವನ್ನು ಮುಚ್ಚಿಡಲು ಮಾಡಲಾಗುತ್ತಿರುವ ಕೊನೆಯ ಪ್ರಯತ್ನ ಇದಾಗಿರುವಂತಿದೆ” ಎಂದು ಆರೋಪಿಸಿದ್ದಾರೆ. ಮಾಹಿತಿ ತಿಳಿಯವುದು ಜನರ ಹಕ್ಕು ಎಂದು ವಾದಿಸಿದ್ದಾರೆ.
नरेंद्र मोदी ने ‘चंदे के धंधे’ को छिपाने के लिए पूरी ताकत झोंक दी है।
जब सुप्रीम कोर्ट ने कहा है कि इलेक्टोरल बॉण्ड का सच जानना देशवासियों का हक़ है, तब SBI क्यों चाहता है कि चुनाव से पहले यह जानकारी सार्वजनिक न हो पाए?
एक क्लिक पर निकाली जा सकने वाली जानकारी के लिए 30 जून तक…
— Rahul Gandhi (@RahulGandhi) March 4, 2024
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ನರೇಂದ್ರ ಮೋದಿಯವರು ತಮ್ಮ ‘ಚಂದಾ ದಂಧೆ’ಯನ್ನು ಮರೆಮಾಚಲು ಶತಪ್ರಯತ್ನ ನಡೆಸಿದ್ದಾರೆ, ನಡೆಸುತ್ತಿದ್ದಾರೆ. ಚುನಾವಣಾ ಬಾಂಡ್‌ಗಳ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವುದು ದೇಶವಾಸಿಗಳ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಿರುವಾಗ ಎಸ್‌ಬಿಐ ಈ ಮಾಹಿತಿಯನ್ನು ಚುನಾವಣೆಯ ಮೊದಲು ಸಾರ್ವಜನಿಕಗೊಳಿಸಲಾಗದು ಎಂದು ಹೇಳುವುದೇಕೆ,” ಎಂದು ಪ್ರಶ್ನಿಸಿದ್ದಾರೆ.
“ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬಹುದು, ಆದರೆ ಮಾಹಿತಿ ನೀಡಲು ಜೂನ್ 30 ರವರೆಗೆ ಎಸ್‌ಬಿಐ ಸಮಯ ಕೇಳಿದೆ. ಇದನ್ನು ನೋಡಿದಾಗ ಇಲ್ಲಿ ಏನೋ ಒಂದು ಸಮಸ್ಯೆ ಇದೆ ಅನಿಸಲ್ಲ, ಇಲ್ಲೆರುವುದೆಲ್ಲವೂ ಸಮಸ್ಯೆ ಎಂದು ಅರ್ಥವಾಗುತ್ತದೆ,” ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
“ದೇಶದ ಪ್ರತಿಯೊಂದು ಸ್ವತಂತ್ರ ಸಂಘಟನೆಗಳು ಮೋದಿ ಕುಟುಂಬಕ್ಕೆ ಸೇರುವ ಮೂಲಕ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಚುನಾವಣೆಗೂ ಮುನ್ನವೇ ಮೋದಿಯ ‘ನಿಜ ಮುಖ’ ಮರೆಮಾಚುವ ‘ಕೊನೆಯ ಪ್ರಯತ್ನ’ ಇದಾಗಿದೆ,” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಐದು ವರ್ಷದಲ್ಲಿ 22217 ಚುನಾವಣಾ ಬಾಂಡ್
ಚುನಾವಣಾ ಬಾಂಡ್‌ಗಳ ವಿವರವನ್ನು ಎಸ್‌ಬಿಐ ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ತಿಳಿಸಿತ್ತು. ಪ್ರತಿ ಬಾಂಡ್ ಖರೀದಿಯ ದಿನ, ತಿಂಗಳು, ಖರೀದಿ ಮಾಡಿದವರ ವಿವರ, ಮೊತ್ತ ಎಲ್ಲ ಮಾಹಿತಿ ನೀಡಬೇಕು ಎಂದು ಎಸ್‌ಬಿಐಗೆ ಸುಪ್ರೀಂ ಸೂಚನೆ ನೀಡಿತ್ತು. ಮಾರ್ಚ್ 13ರ ಒಳಗಾಗಿ ಎಲ್ಲ ವಿವರವನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ತಿಳಿಸಲಾಗಿತ್ತು.
ಈ ನಿಟ್ಟಿನಲ್ಲಿ ಎಸ್‌ಬಿಐ ಕಳೆದ ಐದು ವರ್ಷಗಳ ಅವಧಿಯುಲ್ಲಿ ದೇಶದಲ್ಲಿ 22217 ಚುನಾವಣಾ ಬಾಂಡ್‌ಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸಲಾಗಿದೆ ಎಂದು ಬಹಿರಂಗಪಡಿಸಿದೆ. ಆದರೆ ಎಲ್ಲ ಮಾಹಿತಿ ನೀಡಲು ಅವಕಾಶವನ್ನು ಜೂನ್ 30ರವರೆಗೆ ವಿಸ್ತರಿಸಲು ಮನವಿ ಮಾಡಿದೆ.
ಎಸ್‌ಬಿಐನ ಈ ಮನವಿಯನ್ನು ವಿಪಕ್ಷಗಳು ಪ್ರಶ್ನಿಸಿದೆ. ಎಸ್‌ಬಿಐನ ಈ ನಡೆ ಅನುಮಾನ ಹುಟ್ಟಿಸಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟ್ವೀಟ್ ಮಾಡಿದ್ದಾರೆ. ಮೋದಿ ಮತ್ತು ಬಿಜೆಪಿಯನ್ನು ರಕ್ಷಿಸಲೆಂದೆ ಸಾರ್ವತ್ರಿಕ ಚುನಾವಣೆ ಆಗುವವರೆಗೂ ಅವಧಿ ವಿಸ್ತರಣೆಗೆ ಎಸ್‌ಬಿಐ ಮನವಿ ಮಾಡಿದೆ ಎಂದು ಆರೋಪಿಸಿದ್ದಾರೆ.