ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವದೆಹಲಿಯ ಕರೋಲ್‌ಬಾಗ್ ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿ ಮೆಕ್ಯಾನಿಕ್‌ಗಳೊಂದಿಗೆ ಬೈಕ್ ರಿಪೇರಿ ಕೆಲಸದಲ್ಲಿ ಪಾಲ್ಗೊಂಡರು.
ನಂತರ ಮೆಕ್ಯಾನಿಕ್‌ಗಳ ಜೊತೆಗೆ, ವ್ಯಾಪಾರಿಗಳು ಹಾಗೂ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದರು. ಅವರೊಂದಿಗೆ ಮಾತನಾಡಿ ಮೆಕ್ಯಾನಿಕ್‌ಗಳು ಎದರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.
“ಈ ಕೈಗಳು ಭಾರತವನ್ನು ನಿರ್ಮಿಸುತ್ತದೆ. ಈ ಬಟ್ಟೆಗಳ ಮೇಲಿನ ಗ್ರೀಸ್ ನಮ್ಮ ಹೆಮ್ಮೆ ಮತ್ತು ಆತ್ಮಗೌರವವಾಗಿದೆ. ಒಬ್ಬ ಜನರ ನಾಯಕ ಮಾತ್ರ ಅವರನ್ನು ಪ್ರೋತ್ಸಾಹಿಸಲು ಕೆಲಸ ಮಾಡುತ್ತಾನೆ. ನೋವುಗಳನ್ನು ಬದಲಿಸುವ ನಿಟ್ಟಿನಲ್ಲಿ ರಥದ ಗಾಲಿಗಳನ್ನು ತಿರುಗಿಸುವ ಮೂಲಕ ಭಾರತವನ್ನು ಮುನ್ನೆಡೆಸುತ್ತಿರುವ ಕೈಗಳಿಂದ ಕಲಿಯುವ ಪ್ರಯತ್ನ. ಭಾರತ್ ಜೋಡೊ ಯಾತ್ರೆ ಮುಂದುವರಿಯುತ್ತದೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಬರೆದುಕೊಂಡಿದ್ದಾರೆ.
ಕರೋಲ್‌ಬಾಗ್ ಮಾರುಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಸುತ್ತ ಸಾಕಷ್ಟು ಸ್ಥಳೀಯರು ಹಾಗೂ ಅಭಿಮಾನಿಗಳು ಸೇರಿದ್ದರು. ಹಸ್ತಲಾಘವ ಮಾಡಲು ಹಾಗೂ ಭಾವಚಿತ್ರ ತೆಗೆಸಿಕೊಳ್ಳಲು ಮುಗಿಬಿದ್ದರು.
ಈ ಸುದ್ದಿ ಓದಿದ್ದೀರಾ? ಚುನಾವಣೆಗೂ ಮುನ್ನ ಕೆಸಿಆರ್‌ಗೆ ಆಘಾತ: ಮಾಜಿ ಸಚಿವರು, ಶಾಸಕರು ಸೇರಿ 35 ಮಂದಿ ‘ಕೈ’ ಸೇರ್ಪಡೆಗೆ ಸಜ್ಜು
ಕೆಲವು ದಿನಗಳ ಹಿಂದೆ ರಾಹುಲ್ ಅವರು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್ ನಲ್ಲಿ ಪ್ರಯಾಣಿಸಿದ್ದರು. ಅದೇ ರೀತಿ ಅಮೆರಿಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ 190 ಕಿಮೀ ಟ್ರಕ್‌ನಲ್ಲಿ ಸಂಚರಿಸಿ ಸುದ್ದಿಯಾಗಿದ್ದರು. ತಮ್ಮ ಪ್ರಯಾಣದಲ್ಲಿ ಭಾರತೀಯ ಮೂಲದ ಚಾಲಕನೊಂದಿಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು.
ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ರಾಹುಲ್ ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ಬ್ಲಿಂಕಿಟ್ ಡೆಲಿವರಿ ಎಕ್ಸಿಕ್ಯೂಟಿವ್ ಜೊತೆ ಪಿಲಿಯನ್ ಸವಾರಿ ಮಾಡಿದ್ದರು ಈ ವೇಳೆ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು.