2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಅವರೇ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಬಿಹಾರ ವಿಧಾನಸಭೆ ವಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ಹೇಳಿದ್ದಾರೆ. ಹಾಗೆಯೇ ಮುಂದಿನ ಚುನಾವಣೆ ಬಳಿಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿಸಲು ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಮತ ಕಳವು ವಿರುದ್ಧವಾಗಿ ಬಿಹಾರದಲ್ಲಿ ಮತ ಅಧಿಕಾರ ಯಾತ್ರೆ ನಡೆಯುತ್ತಿದ್ದು, ನವಡಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ತೇಜಸ್ವಿ ಯಾದವ್ ಅವರು, “ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ‘ನಿದ್ರಿಸಲಾಗದ ರಾತ್ರಿಗಳನ್ನು’ ಕಾಣುವಂತೆ ಮಾಡಿದ್ದಾರೆ. ರಾಹುಲ್ ಅವರನ್ನೇ ಮುಂದಿನ ಪ್ರಧಾನಿಯನ್ನಾಗಿ ಮಾಡುವಂತೆ ಜನರ ಬಳಿ ನಾನು ಒತ್ತಾಯಿಸುತ್ತೇನೆ” ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರದಲ್ಲಿ ರಾಹುಲ್ ಗಾಂಧಿ ‘ಮತದಾರರ ಅಧಿಕಾರ ಯಾತ್ರೆ’
“ಎರಡು ದಶಕಗಳಲ್ಲಿ ಬಿಹಾರವನ್ನು ಆಳಿದ್ದು ದುರ್ಬಲ ಸರ್ಕಾರ” ಎಂದು ಹೇಳಿದ ತೇಜಸ್ವಿ, “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುವಕರು ತಮ್ಮ ದುರಾಡಳಿತಕ್ಕೆ ಅಂತ್ಯ ಹಾಡಲು ದೃಢನಿಶ್ಚಯ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಇನ್ನು ಬಿಹಾರದಲ್ಲಿ ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಎಂದು ಆರ್‌ಜೆಡಿ ಹೇಳುತ್ತಿದೆ. ಆದರೆ ಈವರೆಗೂ ಕಾಂಗ್ರೆಸ್ ಅಥವಾ ರಾಹುಲ್ ಗಾಂಧಿ ಈ ಬಗ್ಗೆ ಬಹಿರಂಗ ಘೋಷಣೆಯನ್ನು ಮಾಡಿಲ್ಲ. ಇವೆಲ್ಲವುದರ ನಡುವೆ ತೇಜಸ್ವಿ ಲೋಕಸಭೆ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ್ದು ರಾಹುಲ್ ಪ್ರಧಾನಿ ಅಭ್ಯರ್ಥಿ ಎಂದಿದ್ದಾರೆ.
