ಸದ್ಯ ದೇಶದಲ್ಲಿ ರಾಹುಲ್ ಗಾಂಧಿ ಯುಗ ಆರಂಭವಾಗಿದೆ ಎಂಬ ಮಾತುಗಳಿವೆ. ಯಾಕೆಂದರೆ, ‘ಮೊಹಬ್ಬತ್ ಕೀ ದುಖಾನ್’ ತೆರೆಯುತ್ತೇನೆ ಅಂತ ದೇಶದಲ್ಲಿ ‘ಪ್ರೀತಿಯ ಮೊಂಬತ್ತಿ’ ಹಚ್ಚಿದ ರಾಹುಲ್‌ಗೆ ದೇಶದ ಜನರು ಫೀದಾ ಆಗಿದ್ದಾರೆ. ಅವರ ವಿಚಾರ, ತಿಳುವಳಿಕೆ ಸೇರಿದಂತೆ ಅವರು ಕೈಗೊಳ್ಳುವ ಸಂವಾದಗಳು, ಪ್ರತಿಭಟನೆಗಳು, ಹಾಗೆಯೇ ದೇಶವನ್ನು ಒಗ್ಗೂಡಿಸಲು ಅವರು ಕೈಗೊಂಡಿದ್ದ ‘ಜೋಡೊ ಯಾತ್ರೆ’ ಇಡೀ ದೇಶದ ಜನರು ರಾಹುಲ್ ಅವರತ್ತ ತಿರುಗಿ ನೋಡುವಂತೆ ಮಾಡಿತ್ತು. ಇದೀಗ, ರಾಹುಲ್ ಯುಗದ ಕಾಂಗ್ರೆಸ್ ತನ್ನ ಸಿದ್ದಾಂತ ಮತ್ತು ವಿಚಾರಗಳಿಗೆ ವಿರುದ್ಧವಾಗಿ ಘನಘೋರ ತಪ್ಪು ನಡೆಯತ್ತ ಮುಖ ಮಾಡಿದೆ.
ಹೌದು, 2018ರ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಥುವಾ ಬಳಿಯ ರಸಾನಾ ಗ್ರಾಮದಲ್ಲಿ ಏಳು ಮಂದಿ ಕಾಮುಕರು (ಆರು ಪುರುಷರು ಮತ್ತು ಒಬ್ಬ ಬಾಲಾಪರಾಧಿ) ಸೇರಿ 8 ವರ್ಷದ ಮುಸ್ಲಿಂ ಬಾಲಕಿ ಆಸಿಫಾ ಬಾನೊ ಅವರನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿದ್ದರು. ಇಡೀ ಮನುಕುಲವೇ ಬೆಚ್ಚಿ ಬೀಳುವ ಪ್ರಕರಣ ಇದಾಗಿತ್ತು. ಇದು ಇಡೀ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಕೂಡ ಆಗಿತ್ತು. ಬಳಿಕ, ದೇಶದಲ್ಲಿ ಈ ಘಟನೆಯನ್ನ ಖಂಡಿಸಿ ಹಲವು ಪ್ರತಿಭಟನೆಗಳು ನಡೆದವು. ಈ ಘಟನೆಯು ಜಮ್ಮು ಮತ್ತು ಕಾಶ್ಮೀರದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಆದರೆ, ಅತ್ಯಾಚಾರ – ಕೊಲೆ ಆರೋಪಿಗಳನ್ನು ಸಮರ್ಥಿಸಿಕೊಂಡು, ಅವರ ಬಂಧನದ ವಿರುದ್ಧ ಬಲಪಂಥೀಯ ಹಿಂದುತ್ವವಾದಿ ಕೋಮು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಪ್ರಕರಣದಲ್ಲಿ ಬಂಧಿತರೆಲ್ಲರೂ ಹಿಂದೂಗಳು ಎಂಬ ಕಾರಣಕ್ಕೆ ಬಿಜೆಪಿಯೂ ಸೇರಿದಂತೆ ಕೋಮುವಾದಿ ಸಂಘಟನೆಗಳು ಆರೋಪಿಗಳ ಪರವಾಗಿ ಪ್ರತಿಭಟನೆ ನಡೆಸಿದ್ದವು. ಅಂತಹದೊಂದು ಪ್ರತಿಭಟನೆಯಲ್ಲಿ 2018ರಲ್ಲಿ, ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿಯ ಲಾಲ್ ಸಿಂಗ್ ಚೌಧರಿ ಮತ್ತು ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ ಚಂದರ್ ಪ್ರಕಾಶ್ ಕೂಡ ಭಾಗವಹಿಸಿದ್ದರು.
ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನ ಹೀನಾಯವಾಗಿ ಕೊಂದ ದುರುಳರನ್ನ ಬೆಂಬಲಿಸಿ ಸ್ಥಳೀಯ ಹಿಂದುತ್ವ ನಾಯಕರು ಆಯೋಜಿಸಿದ್ದ ’ಹಿಂದೂ ಏಕತಾ’ ರ‍್ಯಾಲಿಯಲ್ಲಿ ಈ ಇಬ್ಬರು ರಾಜಕಾರಣಿಗಳು ಭಾಗವಹಿಸಿದ್ದರು. ಅತ್ಯಾಚಾರ ಆರೋಪಿಗಳಾದ ಪರ್ವೇಶ್ ಕುಮಾರ್, ಸಂಜಿ ರಾಮ್ ಹಾಗೂ ದೀಪಕ್ ಖಜುರಿಯಾ ಪರ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಲಾಲ್ ಸಿಂಗ್, ಪೊಲೀಸ್ ತನಿಖೆಯನ್ನು ಪ್ರಶ್ನೆ ಮಾಡಿದ್ದರು.
ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ‘ಹಿಂದುಗಳ ವಿರುದ್ಧದ ಪಿತೂರಿಯ ಪ್ರಯತ್ನ’ ಎಂಬ ಹೇಳಿಕೆಯನ್ನೂ ಲಾಲ್ ಸಿಂಗ್ ನೀಡಿದ್ದರು. ಲಾಲ್ ಸಿಂಗ್ ಅವರ ಈ ಹೇಳಿಕೆ, ಆಗಿನ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಿರುದ್ದ ಜನಾಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಬಳಿಕ ಅವರು ಬಿಜೆಪಿ ತೊರೆದು, ‘ಡೋಗ್ರಾ ಸ್ವಾಭಿಮಾನ್ ಸಂಘಟನೆ’ ಎಂಬ ಪಕ್ಷವನ್ನೂ ಕಟ್ಟಿದ್ದರು. ನಂತರ, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ 2024ರ ಮಾರ್ಚ್ 20ರಂದು ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿ, ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆಗೆ ವಿಲೀನ ಮಾಡಿದ್ದರು.
ಅಂದಹಾಗೆ, 2014ಕ್ಕಿಂತ ಮೊದಲು ಲಾಲ್ ಸಿಂಗ್ ಕಾಂಗ್ರೆಸ್‌ನಲ್ಲೇ ಇದ್ದರು. ಎರಡು ಬಾರಿ ಪಕ್ಷದ ಟಿಕೆಟ್‌ನಲ್ಲಿ ಉದಂಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗಿದ್ದರು. 2014ರಲ್ಲಿ ಕಾಂಗ್ರೆಸ್ ಟಿಕೆಟ್ ನೀಡುದಿದ್ದಕ್ಕೆ ಬಿಜೆಪಿ ಸೇರ್ಪಡೆಗೊಂಡು ಮೆಹಬೂಬಾ ಮುಫ್ತಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.
ಲಾಲ್ ಸಿಂಗ್ ಕಾಂಗ್ರೆಸ್‌ಗೆ ಮರು ಸೇರ್ಪಡೆಯಾದ ಬಳಿಕ, ಲೋಕಸಭಾ ಚುನಾವಣೆಗೆ ಉದಂಪುರ-ದೋಡಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಆದರೆ, ಅವರು 1.24 ಲಕ್ಷ ಮತಗಳ ಅಂತರದಿಂದ ಸೋತಿದ್ದರು. ಇದೀಗ, ಅವರಿಗೆ ಬಸೋಹ್ಲಿ ಕ್ಷೇತ್ರದಿಂದ ಮತ್ತೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಸೆಪ್ಟೆಂಬರ್ 9ರಂದು ಬಿಡುಗಡೆ ಮಾಡಿದ್ದು, ಅದರಲ್ಲಿ ಲಾಲ್ ಸಿಂಗ್ ಹೆಸರೂ ಇದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಒಗ್ಗಟ್ಟಿನ ಮಂತ್ರವೇ ಮದ್ದು
ಇನ್ನು 2023ರಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ ಜೋಡೋ ಯಾತ್ರೆ ಜಮ್ಮು ಕಾಶ್ಮೀರ ಪ್ರವೇಶ ಮಾಡಿದಾಗ ಲಾಲ್ ಸಿಂಗ್ ಯಾತ್ರೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್‌ನ ಈ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷದ ವಕ್ತಾರೆ ದೀಪಕ್ ಪುಷ್ಕರ್ ನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇವರು ಕಥುವಾ ಸಂತ್ರಸ್ತೆಯ ಪರವಾಗಿ ವಾದ ಮಾಡಿದ್ದ ವಕೀಲೆ ಕೂಡ…
ಲಾಲ್ ಸಿಂಗ್ ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಂಡಾಗ ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಮಾಜಿ ಕಾಂಗ್ರೆಸ್ ನಾಯಕ ಹಾಗೂ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಮುಖ್ಯಸ್ಥ ಗುಲಾಂ ನಬಿ ಆಜಾದ್, “ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಲಾಲ್ ಸಿಂಗ್ ಅನ್ನು ಪಕ್ಷಕ್ಕೆ ಸ್ವಾಗತಿಸಿದ್ದಕ್ಕೆ ನಾಚಿಕೆಯಾಗಬೇಕು. 8 ವರ್ಷದ ಬಾಲಕಿಯ ಅತ್ಯಾಚಾರಿಗಳನ್ನು ಬೆಂಬಲಿಸಿದ ಲಾಲ್ ಸಿಂಗ್ ಅನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ತನ್ನ ಮೂಲ ತತ್ವಗಳು ಮತ್ತು ಸಿದ್ಧಾಂತಗಳಿಗೆ ದ್ರೋಹ ಬಗೆದಿದೆ” ಎಂದು ಹೇಳಿದ್ದರು.
ಹಿಂದು ಪ್ರಾಬಲ್ಯದ ಪ್ರದೇಶದಲ್ಲಿ ಮತಗಳನ್ನ ಕ್ರೂಢಿಕರಿಸಲು ಹಾಗೂ ಬಿಜೆಪಿಯನ್ನ ಸೋಲಿಸಲು ಕಾಂಗ್ರೆಸ್ ಲಾಲ್ ಸಿಂಗ್‌ಗೆ ಟಿಕೆಟ್ ನೀಡಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ನ ಈ ನಿರ್ಧಾರ ಮಿತ್ರಪಕ್ಷಗಳಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚುನಾವಣಾ ಲಾಭಕ್ಕಾಗಿ ತನ್ನ ಮೌಲ್ಯಗಳು, ಸಿದ್ದಾಂತಗಳನ್ನ ರಾಜಿ ಮಾಡಿಕೊಂಡಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿ, ಸಚಿವರಾಗಿದ್ದ ಸಮಯದಲ್ಲೇ ಅತ್ಯಾಚಾರ ಆರೋಪಿಗಳನ್ನ ಬೆಂಬಲಿಸಿ ಬಾಲಕಿಯ ಮೇಲೆ ಹೇಯ ಕೃತ್ಯ ಎಸಗಿದ್ದ ಆರೋಪಿಗಳನ್ನ ಸಮರ್ಥಿಸಿಕೊಂಡು ಇದು ಹಿಂದೂಗಳ ವಿರುದ್ಧದ ಪಿತೂರಿಯ ಪ್ರಯತ್ನ ಎಂದು ಹೇಳಿದ್ದರು. ಅಲ್ಲದೇ, ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಹಿಂದುತ್ವದ ಪ್ರತಿಪಾದಕನಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿರುವುದು ನಿಜಕ್ಕೂ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾಪ್ರಭುತ್ವವಾದಿ, ಸಮಾಜವಾದಿ ವಿಚಾರಗಳುಳ್ಳ ಕಾಂಗ್ರೆಸ್‌ನ ಈ ನಡೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ದುರುಳರ ಪರವಾಗಿ ಪ್ರತಿಭಟನೆ ನಡೆಸಿದ್ದ ವ್ಯಕ್ತಿಯನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡದ್ದು ತಪ್ಪು… ಆತನಿಗೆ ಲೋಕಸಭಾ ಟಿಕೆಟ್ ಕೊಟ್ಟದ್ದು ದೊಡ್ಡ ತಪ್ಪು. ಇದೀಗ, ವಿಧಾನಸಭಾ ಟಿಕೆಟ್ ಕೊಟ್ಟದ್ದು ಮಹಾ ತಪ್ಪು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.