ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಒಂದು ವಾರವಷ್ಟೇ ಬಾಕಿ ಇದ್ದು, ಯುಡಿಎಫ್ ಮತ್ತು ಎಲ್‌ಡಿಎಫ್ ಮೈತ್ರಿಕೂಟಗಳು ಪ್ರಚಾರವನ್ನು ತೀವ್ರಗೊಳಿಸಿವೆ. ನೆರೆಯ ರಾಜ್ಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡುವಿನ ಪೈಪೋಟಿಯ ಕಣವಾಗಿ ಗಮನ ಸೆಳೆಯುತ್ತಿದೆ. ಕೇರಳದಲ್ಲಿ ಪಿಣಾರಾಯಿ ನೇತೃತ್ವದ ಎಲ್‌ಡಿಎಫ್ ಮೈತ್ರಿ ಸರ್ಕಾರ ರಚಿಸಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಯು ವಿರೋಧ ಪಕ್ಷವಾಗಿದೆ.
‘ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇರಳ ಸರ್ಕಾರ ಮಾತನಾಡುವುದಿಲ್ಲ’ ಎಂದು ಪಿಣರಾಯಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಮೋದಿಯವರ ಜನವಿರೋಧಿ ನೀತಿಗಳ ವಿರುದ್ಧ ಹೋರಾಟಲು ಎಲ್‌ಡಿಎಫ್‌ಗೆ ಕಾಂಗ್ರೆಸ್‌ನ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಪಿಣರಾಯಿ ತಿರುಗೇಟು ನೀಡಿದ್ದಾರೆ.
“ಸಿಎಎ ಮೂಲಕ ಆರ್‌ಎಸ್‌ಎಸ್ ಕಾರ್ಯಸೂಚಿಯನ್ನು ಬಿಜೆಪಿ ಅನುಷ್ಠಾನಗೊಳಿಸುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಆರ್‌ಎಸ್‌ಎಸ್ ಕಾರ್ಯಸೂಚಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್ ವಿಫಲವಾಗಿದೆ. ಸಿಎಎ ವಿರೋಧಿ ಪ್ರತಿಭಟನೆಯಿಂದ ದೂರ ಉಳಿಯುವಂತೆ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವವು ಕೇರಳ ಘಟಕಕ್ಕೆ ಹೇಳಿದೆಯೇ ಎಂಬುದಕ್ಕೆ ರಾಹುಲ್ ಉತ್ತರಿಸಬೇಕು” ಎಂದು ಎಂದು ಪಿಣರಾಯಿ ಹೇಳಿದ್ದಾರೆ.
ಕಣ್ಣೂರು ಮತ್ತು ಪಾಲಕ್ಕಾಡ್‌ನಲ್ಲಿ ಯುಡಿಎಫ್ ಅಭ್ಯರ್ಥಿಗಳ ಪರ ಪ್ರಚಾರದ ವೇಳೆ ಮಾತನಾಡಿದ ರಾಹುಲ್, “ಪಿಣರಾಯಿ ಅವರನ್ನು ಕೇಂದ್ರೀಯ ಸಂಸ್ಥೆಗಳು ಯಾಕೆ ತನಿಖೆ ಮಾಡಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ನಿಂತಿದ್ದಕ್ಕಾಗಿ ಈ ದೇಶದ ಇಬ್ಬರು ಮುಖ್ಯಮಂತ್ರಿಗಳು ಈಗಾಗಲೇ ಜೈಲಿನಲ್ಲಿದ್ದಾರೆ. ಪಿಣರಾಯಿ ಅವರು ಬಿಜೆಪಿ ವಿರುದ್ಧವಾಗಿದ್ದರೆ, ಅವರು ಇನ್ನೂ ಕಾನೂನು ಪರಿಣಾಮಗಳನ್ನು ಯಾಕೆ ಎದುರಿಸಿಲ್ಲವೆಂದು ನನಗೆ ಆಶ್ಚರ್ಯವಾಗುತ್ತಿದೆ. ದಿನದ 24 ಗಂಟೆಯೂ ಮುಖ್ಯಮಂತ್ರಿ ಪಿಣರಾಯಿ ಅವರು ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರ ವರ್ತನೆ ತುಂಬಾ ಆಶ್ಚರ್ಯಕರವಾಗಿದೆ” ಎಂದಿದ್ದಾರೆ.
“ನಿಮ್ಮ ಮುಖ್ಯಮಂತ್ರಿಯ ಮೇಲೆ ಬಿಜೆಪಿಯಿಂದ ಯಾವುದೇ ರೀತಿಯ ದಾಳಿ ನಡೆಯುತ್ತಿಲ್ಲ ಎಂಬುದು ನನಗೆ ಕುತೂಹಲ ಮೂಡಿಸಿದೆ. ಅವರ ಮನೆಯನ್ನು ಯಾರೂ ಕಸಿದುಕೊಂಡಿಲ್ಲ, ವಿಧಾನ ಸಭೆಯ ಸದಸ್ಯತ್ವವನ್ನು ಯಾರೂ ಕಸಿದುಕೊಂಡಿಲ್ಲ. ಅವರನ್ನು ಒಂದು ನಿಮಿಷವೂ ವಿಚಾರಣೆಗೆ (ಕೇಂದ್ರ ಸಂಸ್ಥೆಗಳು) ಕರೆದಿಲ್ಲ. ಅವರು (ಪಿಣರಾಯಿ) ಬಿಜೆಪಿ ವಿರುದ್ಧ ಹೋರಾಡುತ್ತಿದ್ದರೂ ಅವರ ಬಗ್ಗೆ ಬಿಜೆಪಿ ಯಾಕೆ ಒಲವು ಹೊಂದಿದೆ” ಎಂದು ರಾಹುಲ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
“ಯಾರಾದರೂ ಬಿಜೆಪಿ ವಿರುದ್ಧ ಮಾತನಾಡಿದರೆ, ಈ ದೇಶದ ತನಿಖಾ ಸಂಸ್ಥೆಗಳು ಖಂಡಿತವಾಗಿಯೂ ಅವರ ಹಿಂದೆ ಬೀಳುತ್ತವೆ. ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸುತ್ತಿದ್ದೇನೆ ಎಂದು ಪಿಣರಾಯಿ ಹೇಳಿದ್ದಾರೆ. ಹಾಗಾದರೆ, ಕೇರಳದಲ್ಲಿ ಪಿಣರಾಯಿ ವಿರುದ್ಧ ಇಡಿ ಯಾಕೆ ಏನನ್ನೂ ಮಾಡುತ್ತಿಲ್ಲ” ಎಂದು ಹೇಳಿದ್ದಾರೆ.
ಪಾಲಕ್ಕಾಡ್‌ನಲ್ಲಿ ಯುಡಿಎಫ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, “ನಾನು ಹೋದ ಪ್ರತಿಯೊಂದು ರಾಜ್ಯದಲ್ಲೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತೇನೆ. ಆದರೆ, ಕೇರಳ ಸಿಎಂ ತಮ್ಮ ಇಡೀ ಸಮಯವನ್ನು ನನ್ನ ಮೇಲೆ ದಾಳಿ ಮಾಡುವುದರಲ್ಲೇ ಕಳೆಯುತ್ತಾರೆ. ಅವರು ಬಿಜೆಪಿ ವಿರುದ್ಧ ಒಂದೇ ಒಂದು ಮಾತನ್ನಾಡುವುದಿಲ್ಲ. ಈ ಬಗ್ಗೆ ನೀವೇ ಯೋಚಿಸಬೇಕು” ಎಂದು ಮತದಾರರಿಗೆ ಸೂಚಿಸಿದರು.
ರಾಹುಲ್ ಹೇಳಿಕೆಗೆ ತಿರುಗೇಟು ನೀಡಿರುವ ಪಿಣರಾಯಿ ವಿಜಯನ್, “ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಹೋರಾಡಲು ಎಲ್‌ಡಿಎಫ್‌ಗೆ ಕಾಂಗ್ರೆಸ್‌ನಿಂದ ಪ್ರಮಾಣಪತ್ರದ ಅಗತ್ಯವಿಲ್ಲ. ಗೋಳ್ವಾಲ್ಕರ್ ಅವರ ಭಾವಚಿತ್ರದ ಮುಂದೆ ದೀಪ ಹಚ್ಚಿ, ಆರ್‌ಎಸ್‌ಎಸ್‌ಗೆ ಮನವಿ ಮಾಡಿ ಮತ ಯಾಚಿಸಿದವರು ನಮಗೆ ಉಪನ್ಯಾಸ ನೀಡಬಾರದು” ಎಂದಿದ್ದಾರೆ.
“ಸಿಎಎ ಮೂಲಕ ಬಿಜೆಪಿ ಆರ್‌ಎಸ್‌ಎಸ್ ಅಜೆಂಡಾವನ್ನು ಜಾರಿಗೆ ತರುತ್ತಿದೆ. ಸಿಎಎ ವಿರುದ್ಧ ಹೋರಾಟ ನಡೆಸುತವಲ್ಲಿ ಕಾಂಗ್ರೆಸ್ ವಿಫಲವಾಗಿದೆ. 2019ರಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಪ್ರಕಾಶ್ ಕಾರಟ್ ಮತ್ತು ಬೃಂದಾ ಕಾರಟ್ ಅವರನ್ನು ಬಂಧಿಸಲಾಯಿತು. ಆ ಬಂಧಿತರ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರನ್ನ ಯಾರಾದರೂ ನೋಡಿದ್ದೀರಾ? ಕೇರಳದಲ್ಲಿ ಕಾಂಗ್ರೆಸ್ಅನ್ನು ಮಾತ್ರವೇ ಟೀಕಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ, ನನ್ನ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಬೇಕು. ಸಿಎಎ ಪ್ರತಿಭಟನೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆಯಿಂದ ದೂರ ಉಳಿದಿದ್ದು ಏಕೆ?” ಎಂದಿದ್ದಾರೆ
“ಕೇರಳದಲ್ಲಿ ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿ ಸೇರುತ್ತಿದ್ದಾರೆ. ಇನ್ನೂ ಅನೇಕ ಯುಡಿಎಫ್ ನಾಯಕರು ಬಿಜೆಪಿ ಸೇರಲು ರಾಜ್ಯದಲ್ಲಿ ಕಾಯುತ್ತಿದ್ದಾರೆ. ಜನರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ನಿಲುವು ತಾಳದ ಅವಕಾಶವಾದಿ ಕಾಂಗ್ರೆಸ್ ವಿರುದ್ಧ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜನರು ಮತ ಹಾಕಲಿದ್ದಾರೆ” ಎಂದು ಪಿಣರಾಯಿ ಹೇಳಿದ್ದಾರೆ.
“ಸಿಎಎ ಮತ್ತು ಕೇಂದ್ರ ಸರ್ಕಾರದ ಹಣಕಾಸು ನೀತಿಗಳ ವಿರುದ್ಧ ಬಲವಾದ ನಿಲುವು ತೆಗೆದುಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಕೆಲವು ವಿಷಯಗಳಲ್ಲಿ ದೃಢ ನಿಲುವು ತಳೆದ ಎಲ್‌ಡಿಎಫ್ ಮತ್ತು ದೃಢ ನಿಲುವು ತಳೆಯುವಲ್ಲಿ ವಿಫಲವಾದ ಯುಡಿಎಫ್ ನಡುವೆ ಕೇರಳದಲ್ಲಿ ಹೋರಾಟ ನಡೆಯುತ್ತಿದೆ. ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಎನ್‌ಡಿಎ ಈ ಚುನಾವಣೆಯ ನಂತರ ಅಪ್ರಸ್ತುತವಾಗಲಿದೆ” ಎಂದು ಪಿಣರಾಯಿ ಹೇಳಿದ್ದಾರೆ.