ಬಳ್ಳಾರಿಯ ಜೀನ್ಸ್ ತಯಾರಿಕಾ ಘಟಕಗಳ ಸೌಲಭ್ಯಗಳನ್ನು ಸುಧಾರಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಹುಲ್ ಗಾಂಧಿ ಅವರು ಪತ್ರ ಬರೆದ ಬಳಿಕ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಮತ್ತು ಅವರ ತಂಡವು ಜೀನ್ಸ್ ಬಟ್ಟೆ ತಯಾರಕರಿಗೆ ಸೌಲಭ್ಯ ಕಲ್ಪಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 300 ಸಣ್ಣ ಮತ್ತು ಮಧ್ಯಮ ಜೀನ್ಸ್ ಉತ್ಪಾದನಾ ಘಟಕಗಳ ನೆಲೆಯಾಗಿದ್ದು, ಸಾವಿರಾರು ಕುಟುಂಬಗಳು ಈ ಉದ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿವೆ.
ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ನಿಮಿತ್ತ ಬಳ್ಳಾರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಜಿಲ್ಲೆಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸಿ ಬಳ್ಳಾರಿಯನ್ನು ‘ಜೀನ್ಸ್ ಕ್ಯಾಪಿಟಲ್’ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಅದೇ ನಿಟ್ಟಿನಲ್ಲಿ ಬಳ್ಳಾರಿ ಜೀನ್ಸ್ ಘಟಕಗಳಿಗೆ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೂ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಂ ರಾಜನ್ ಅವರೊಂದಿಗೆ ಸಂವಾದವೊಂದರಲ್ಲಿ ಪಾಲ್ಗೊಂಡು ಸಾವಿರಾರು ಜನರ ಜೀವನಕ್ಕೆ ಆಧಾರವಾಗಿದ್ದ ಬಳ್ಳಾರಿ ಜೀನ್ಸ್ ಘಟಕಗಳು ಅವನತಿ ಹೊಂದುತ್ತಿರುವ ಬಗ್ಗೆ ಮಾತನಾಡಿ ಘಟಕಗಳನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿರುವ ಜೀನ್ಸ್ ತಯಾರಕ ಭರತ್ ಮುತ್ತಾ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ, ನಾವು ಕಳೆದ 40 ವರ್ಷಗಳಿಂದ ಜೀನ್ಸ್ ತಯಾರಿಸುತ್ತಿರುವ ಅತ್ಯಂತ ಹಳೆಯ ತಯಾರಕರಾಗಿದ್ದೇವೆ. ನಮಗೆ ಉತ್ತಮ ಸಂಪರ್ಕ ವ್ಯವಸ್ಥೆ ಅಗತ್ಯವಿದೆ. ನಮ್ಮ ಉತ್ಪನ್ನಗಳು ಚೆನ್ನೈ, ಮುಂಬೈ ಮತ್ತು ಇತರ ನಗರಗಳಲ್ಲಿನ ಮಾರುಕಟ್ಟೆಗಳನ್ನು ತಲುಪಬೇಕಾಗಿದೆ. ಆಂಧ್ರ ಪ್ರದೇಶದ ಗುಂತಕಲ್‌ನಂತಹ ನಗರಗಳಲ್ಲಿನ ರೈಲು ನಿಲ್ದಾಣಗಳ ಮೇಲೆ ನಾವು ಅವಲಂಬಿತವಾಗದಿರಲು ಉತ್ತಮ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯ ಅತ್ಯಗತ್ಯ” ಎಂದು ಹೇಳಿದರು.
ಈ ಸುದ್ದಿ ಓದಿದ್ದಾರಾ? ಕರ್ನಾಟಕದ ಒಂದು ಸೇರಿ ದೇಶದ 20 ವಿವಿ ನಕಲಿ : ಯುಜಿಸಿ ಘೋಷಣೆ
“ಅಲ್ಲದೆ, ಜೀನ್ಸ್ ತಯಾರಕರು ಉತ್ಪನ್ನವನ್ನು ಸ್ವಚ್ಛಗೊಳಿಸಲು ರಾಸಾಯನಿಕಗಳನ್ನು ಬಳಸುತ್ತಾರೆ. ಇದರಿಂದ ಮಾಲಿನ್ಯವನ್ನು ಉಂಟುಮಾಡುತ್ತಾರೆ ಎಂದು ಆರೋಪಿಸಿ ನಮಗೆಲ್ಲರಿಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್‌ಗಳನ್ನು ನೀಡಲಾಯಿತು. ಆದ ಕಾರಣ ಸರಕಾರದಿಂದ ಕಡ್ಡಾಯವಾಗಿ ಬಳ್ಳಾರಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕಿದೆ. ಜೊತೆಗೆ ಬಳ್ಳಾರಿಗೂ ಉತ್ತಮ ವಿಮಾನ ಸಂಪರ್ಕದ ಅಗತ್ಯವಿದೆ. ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಅವ್ಯವಸ್ಥಿತವಾಗಿದ್ದು, ಈ ಬಗ್ಗೆ ಗಮನಹರಿಸಬೇಕಿದೆ. ಈಗಾಗಲೇ 10-15 ಜೀನ್ಸ್ ಘಟಕಗಳು ಅಹಮದಾಬಾದ್‌ಗೆ ಮತ್ತು 4-5 ಬೆಂಗಳೂರಿಗೆ ಸ್ಥಳಾಂತರಗೊಂಡಿವೆ. ಅಲ್ಲದೆ, 10-15 ಮಂದಿ ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ. ಮೂಲಸೌಕರ್ಯದ ಗಂಭೀರ ಸಮಸ್ಯೆಗಳಿಲ್ಲದಿದ್ದರೆ ಯಾರು ತಾನೆ ಬಳ್ಳಾರಿಯಿಂದ ಬೇರೆ ಕಡೆ ಸ್ಥಳಾಂತರಗೊಳ್ಳುತ್ತಾರೆ? ಎಂದು ಜೀನ್ಸ್ ತಯಾರಕ ಭರತ್ ಮುತ್ತಾ ಪ್ರಶ್ನಿಸಿದರು.
ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಜೀನ್ಸ್ ತಯಾರಕರಿಗೆ ಉತ್ತಮ ಸೌಲಭ್ಯ ಮತ್ತು ರಿಯಾಯಿತಿ ನೀಡಿದರೆ ಅವರಿಗೆ ಉತ್ತೇಜನ ನೀಡಿದಂತಾಗುತ್ತದೆ. ಜಿಲ್ಲೆಯಲ್ಲಿ ಹೂಡಿಕೆ ಮಾಡಲು ನಾವು ಕೆಲವು ಅಂತಾರಾಷ್ಟ್ರೀಯ ಬ್ರಾಂಡ್‌ಗಳನ್ನು ಆಕರ್ಷಿಸಬಹುದು. ಇದು ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದರು.
ಈ ಬಗ್ಗೆ ಸಚಿವ ಎಂ ಬಿ ಪಾಟೀಲ ಮಾತನಾಡಿ, ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲಾಗುವುದು. ತಯಾರಕರ ಕುಂದುಕೊರತೆಗಳನ್ನು ಪರಿಹರಿಸಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.