ರಾಯಚೂರು ತಾಲೂಕಿನ ರೈತರ ಕೃಷಿ ಚಟುವಟಿಕೆಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು. ಲೋಡ್‌ಶೆಡ್ಡಿಂಗ್ ಮಾಡುವುದನ್ನು ಕೈಬಿಡಬೇಕು. ಕುಡಿಯುವ ನೀರಿಗಾಗಿ ಗಣೇಕಲ್ ಜಲಾಶಯ ಭರ್ತಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ದದ್ದಲ್ ಅವರು ಪತ್ರ ಬರೆದಿದ್ದು, “ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ಆರ್ಥಿಕವಾಗಿ ಹಿಂದುಳಿದ ಕ್ಷೇತ್ರವಾಗಿದೆ. ಬೌಗೋಳಿಕವಾಗಿ ಎರಡನೇ ಅತೀ ದೊಡ್ಡ ಕ್ಷೇತ್ರವಾಗಿದೆ. ಕೃಷ್ಣಾ ಮತ್ತು ತುಂಗಭದ್ರ ನದಿಗಳ ಜಲಾನಯನ ಪ್ರದೇಶವಾಗಿದೆ. ಆದರೆ, ತುಂಗಭದ್ರಾ ಜಲಾಶಯ ಮತ್ತು ನಾರಾಯಣಪುರ ಜಲಾಶಯಗಳಿಂದ ಬರುವ ನಾಲೆಗಳ ಕೊನೆ ಭಾಗದಲ್ಲಿ ರಾಯಚೂರು ಗ್ರಾಮೀಣ ಪ್ರದೇಶವಿದ್ದು, ಕೃಷಿ ಭೂಮಿಗೆ ನೀರು ತಲುಪುತ್ತಿಲ್ಲ” ಎಂದು ಹೇಳಿದ್ದಾರೆ.
“ಈ ಭಾಗದ ರೈತರು ಕೃಷಿ ಚಟುವಟಿಕೆಗಾಗಿ ಬೋರ್‌ವೆಲ್ ಅವಲಂಭಿಸಿದ್ದಾರೆ. ಇತ್ತೀಚಿಗೆ ಜೆಸ್ಕಾಂ ಇಲಾಖೆ ನಿತ್ಯವು ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಈಗಾಗಲೇ 34,000 ಹೆಕ್ಟರ್ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿದೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಗಣೇಕಲ್ ಜಲಾಶಯಕ್ಕೆ ಕಾಲುವೆ ಮುಖಾಂತರ ನೀರು ತುಂಬಿಸಬೆಕಿದೆ. ಆದರೇ ಕಾಲುವೆ ನೀರು ಜಲಾಶಯ ತಲುಪಿಲ್ಲ. ಜಲಾಶಯ ಭರ್ತಿ ಮಾಡದಿದ್ದಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಕೂಡಲೇ ಕಾಲುವೆ ಮುಖಾಂತರ ಗಣೇಕಲ್ ಜಲಾಶಯ ಭರ್ತಿಗೆ ಕ್ರಮಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
“ಲೋಡ್ ಶೆಡ್ಡಿಂಗ್ ಕೈಬಿಟ್ಟು ಎಂದಿನಂತೆ ವಿದ್ಯುತ್ ಸರಬರಾಜು ಮಾಡಬೇಕು. ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
ವರದಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್, ರಾಯಚೂರು