ರಾಜಸ್ಥಾನದಲ್ಲಿ ‘ರಾಜೀವ್ ಗಾಂಧಿ ಯುವ ಮಿತ್ರ ಇಂಟರ್ನ್‌ಶಿಪ್ ಯೋಜನೆ’ಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿದೆ. ಪರಿಣಾಮ, ಆ ರಾಜ್ಯದ 4,000ಕ್ಕೂ ಹೆಚ್ಚು ಯುವಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗಿಗಳ ಗುಂಪಿಗೆ ಸೇರಿದ್ದರೆ.
ಹಿಂದೆ ಆಡಳಿತಲ್ಲಿದ್ದ ಕಾಂಗ್ರೆಸ್ ಸರ್ಕಾರ ‘ರಾಜೀವ್ ಗಾಂಧಿ ಯುವ ಮಿತ್ರ ಇಂಟರ್ನ್‌ಶಿಪ್ ಯೋಜನೆ’ಯನ್ನು ಜಾರಿಗೆ ತಂದಿತ್ತು. ಯೋಜನೆಯಡಿ ಯುವಜನರನ್ನು ರಾಜೀವ್ ಗಾಂಧಿ ಯುವ ಮಿತ್ರರಾಗಿ ನೇಮಿಸಿಕೊಂಡಿತ್ತು. ಯೋಜನೆಯಡಿ ನೇಮಕವಾಗಿದ್ದ ಯುವಜನರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ರಾಜ್ಯದಲ್ಲಿ ಪ್ರಚಾರ ಮಾಡುವ, ಜನರಿಗೆ ಆ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು. ಯೋಜನೆಯ ಉದ್ಯೋಗಿಗಳಿಗೆ 17,500 ರೂ. ವೇತನ ನೀಡಲಾಗುತ್ತಿತ್ತು.
ಈಗ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯೋಜನೆಯನ್ನು ಕೊನೆಗೊಳಿಸಲಾಗಿದೆ. ಉದ್ಯೋಗ ಕಳೆದುಕೊಂಡ ಯುವಕರು ಸರ್ಕಾರದ ವಿರುದ್ಧ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. “ಯೋಜನೆಯ ಉದ್ಯೋಗದಿಂದಾಗಿ ನಮ್ಮ ಕುಟುಂಬದ ಬದುಕು ನಡೆಯುತ್ತಿತ್ತು. ಆದರೆ, ಸರ್ಕಾರ ನಮ್ಮ ಉದ್ಯೋಗಗಳನ್ನು ಕಸಿಕೊಂಡಿದೆ. ನಮ್ಮ ಬದುಕು ಅತಂತ್ರವಾಗಿದೆ. ಕಳೆದ ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ನಮ್ಮನ್ನು ಗುತ್ತಿಗೆ ನೌಕರರಾಗಿ ನೇಮಕ ಮಾಡಿಕೊಳ್ಳಬೇಕು” ಎಂದು ಪ್ರತಿಭಟನಾನಿರತ ಯುವಜನರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಜೈಪುರದಲ್ಲಿ ಯುವ ಮಿತ್ರರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. “ಐದು ಸಾವಿರ ಯುವಕರನ್ನು ಅವರ ಕೆಲಸದಿಂದ ತೆಗೆದುಹಾಕಲಾಗಿದೆ. ಸರ್ಕಾರದ ನಿರ್ಧಾರವನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಸರ್ಕಾರ ಮರು ಪರಿಶೀಲಿಸಿ ಆದೇಶವನ್ನು ಹಿಂಪಡೆಯಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರಾಮಮಂದಿರಕ್ಕೆ ದಲಿತರು ಕೊಟ್ಟ ದೇಣಿಗೆಯನ್ನು ‘ಅಶುದ್ಧ’ವೆಂದು ವಾಪಸ್ ಕೊಟ್ಟ ಸವರ್ಣೀಯರು
“ಬಿಜೆಪಿ ಸರ್ಕಾರ ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಉದ್ಯೋಗದ ಭರವಸೆಗಳನ್ನು ಮರೆತಿದೆ. ಈಗ ಯುವಕರನ್ನು ಉದ್ಯೋಗದಿಂದಲೇ ತೆಗೆದುಹಾಕಿದೆ. ಯುವ ಸಮುದಾಯವನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ” ಎಂದು ಸಚಿನ್ ಪೈಲೆಟ್ ಹೇಳಿದ್ದಾರೆ.
2021-22ರ ಬಜೆಟ್ ಭಾಷಣದಲ್ಲಿ ಮಾಜಿ ಸಿಎಂ ಗೆಹ್ಲೋಟ್ ಅವರು ಯುವ ಮಿತ್ರ ಇಂಟರ್ನ್‌ಶಿಪ್ ಯೋಜನೆಯನ್ನು ಘೋಷಿಸಿದ್ದರು. ಇದಕ್ಕೆ ಬಿಜೆಪಿಯು ವಿರೋಧ ಪಕ್ಷದಲ್ಲಿದ್ದಾಗ ಆಕ್ಷೇಪಣೆಗಳನ್ನು ಎತ್ತಿತ್ತು. ಕಾಂಗ್ರೆಸ್ ಸಿದ್ಧಾಂತವನ್ನು ಪ್ರಚಾರ ಮಾಡಲು ಯುವಮಿತ್ರರನ್ನು ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿತ್ತು.