ರಾಜಸ್ಥಾನದ ಎಲ್ಲ ಸರ್ಕಾರಿ ಕಾಲೇಜುಗಳ ಗೇಟ್‌ಗಳಿಗೆ ಕೇಸರಿ ಬಣ್ಣ ಬಳಿಯಬೇಕೆಂದು ರಾಜಸ್ಥಾನ ಸರ್ಕಾರ ಆದೇಶಿಸಿದೆ. ತನ್ನ ಆದೇಶಕ್ಕೆ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಶಾಂತಿಯುತ ಮತ್ತು ಸಕಾರಾತ್ಮಕ ವಾತಾವರಣ ನಿರ್ಮಿಸಬೇಕೆಂಬುದೇ ಕಾರಣವೆಂದು ಹೇಳಿದೆ.
ಕಾಯಕಲ್ಪ್ ಯೋಜನೆಯಡಿ ಈ ಆದೇಶ ಹೊರಸಲಾಗಿದೆ. ಪ್ರಾಯೋಗಿಕವಾಗಿ 10 ವಿಭಾಗಗಳ ಒಟ್ಟು 20 ಕಾಲೇಜುಗಳಲ್ಲಿ ಈ ಆದೇಶವನ್ನು ಜಾರಿಗೆ ತರಲಾಗುವುದು ಎಂದು ರಾಜಸ್ಥಾನ ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.
“ಉನ್ನತ ಶಿಕ್ಷಣದ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಬೇಕು. ಕಾಲೇಜುಗಳ ಶೈಕ್ಷಣಿಕ ವಾತಾವರಣ ವಿದ್ಯಾರ್ಥಿಗಳು ಸಕಾರಾತ್ಮಕ ಭಾವನೆಯನ್ನು ಹೊಂದುವಂತಿರಬೇಕು. ಆದಕ್ಕಾಗಿ, ಕಾಲೇಜುಗಳ ಗೇಟ್‌ಗಳಿಗೆ ಕಿತ್ತಳೆ (ಕೇಸರಿ) ಬಣ್ಣ ಬಳಿಯಲು ನಿರ್ಧರಿಸಲಾಗಿದೆ” ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಈ ಆದೇಶವನ್ನು ಕಾಂಗ್ರೆಸ್ ಟೀಕಿಸಿದೆ. ಈ ಆದೇಶವು ಶಿಕ್ಷಣದ ಕೇಸರಿಕರಣದ ಭಾಗವಾಗಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ವಿದ್ಯಾರ್ಥಿ ಘಟಕ, ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ವಿನೋದ ಜಾಖರ್ ಮಾತನಾಡಿ, “ರಾಜ್ಯದಲ್ಲಿ ಸಾವಿರಾರು ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದರೂ ಕಾಲೇಜುಗಳಲ್ಲಿ ಕಟ್ಟಡಗಳಿಲ್ಲ, ಬೆಂಚುಗಳಿಲ್ಲ, ಸರ್ಕಾರ ರಾಜಕೀಯಕ್ಕಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.