ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ತೇಲಿ ಅವರನ್ನು ಹತ್ಯೆಗೈದ ಹಂತಕರು ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾನುವಾರ ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ನವೆಂಬರ್ 25ರಂದು ವಿಧಾನಸಭೆಗೆ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ರಾಜ್ಯದಲ್ಲಿ ಕೋಮು ಉದ್ವಿಗ್ನತೆ ಉಂಟುಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಜೋಧ್‌ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಸ್ಥಾನ ಗೆಹ್ಲೋಟ್, “ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬದಲಿಗೆ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ನಡೆಸಿದ್ದರೆ, ತನಿಖೆ ತಾರ್ಕಿಕವಾಗಿ ಸಾಗುತ್ತಿತ್ತು” ಎಂದು ಹೇಳಿದರು.
2022ರ ಜೂನ್ 28ರಂದು ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಪ್ರವಾದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಆರೋಪದ ಮೇಲೆ ಬಿಜೆಪಿಯಿಂದ ಅಮಾನತುಕಗೊಂಡಿರುವ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯಾ ಲಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಆ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಅವರ ಹತ್ಯೆ ದೇಶಾದ್ಯಂತ ಆಕ್ರೋಶಕ್ಕೆ ಕಾಋಣವಾಗಿತ್ತು.
ಪ್ರಕರಣವನ್ನು ಆರಂಭದಲ್ಲಿ ಉದಯಪುರದ ಧನ್ಮಂಡಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಬಳಿಕ, ಒಂದೇ ದಿನದಲ್ಲಿ (2022ರ ಜೂನ್ 29ರಂದು) ಎನ್‌ಐಎಗೆ ವರ್ಗಾಯಿಸಲಾಗಿತ್ತು.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿಕೋರರು ವಿಡಿಯೋದಲ್ಲಿ ತಮ್ಮನ್ನು ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ದಿನವೇ ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ತನಿಖೆಗೆ ರಾಜ್ಯ ಸರ್ಕಾರ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಗೆಹ್ಲೋಟ್ ಹೇಳಿದ್ದಾರೆ.
“ಎನ್‌ಐಎ ಏನು ಕ್ರಮ ಕೈಗೊಂಡಿದೆ ಎಂಬುದು ಯಾರಿಗೂ ತಿಳಿದಿಲ್ಲ. ನಮ್ಮ ಎಸ್‌ಒಜಿ ಪ್ರಕರಣವನ್ನು ಮುಂದುವರಿಸಿದ್ದರೆ, ಅಪರಾಧಿಗಳಿಗೆ ಈ ಹೊತ್ತಿಗೆ ಶಿಕ್ಷೆ ವಿಧಿಸಲಾಗುತ್ತಿತ್ತು” ಎಂದು ಅವರು ಭಾನುವಾರ ಹೇಳಿದ್ದಾರೆ.
“ಅಪರಾಧಿಗಳಿಗೆ ಬಿಜೆಪಿಯೊಂದಿಗೆ ಸಂಪರ್ಕವಿದೆ. ಹತ್ಯೆ ಘಟನೆಗೆ ಕೆಲವು ದಿನಗಳ ಮೊದಲು, ಬೇರೊಂದು ಪ್ರಕರಣದಲ್ಲಿ ಆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ, ಅವರನ್ನು ಬಿಡುಗಡೆ ಮಾಡಿಸಲು ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಬಂದಿದ್ದರು” ಎಂದು ರಾಜಸ್ಥಾನ ಮುಖ್ಯಮಂತ್ರಿ ಆರೋಪಿಸಿದ್ದಾರೆ.
“ಬಿಜೆಪಿಯು ಚುನಾವಣೆಯಲ್ಲಿ ಸೋಲು ಭೀತಿಯಲ್ಲಿದೆ. ಆದ್ದರಿಂದ, ವಿಲಕ್ಷಣವಾದ ಹೇಳಿಕೆಗಳನ್ನು ನೀಡುತ್ತಿದೆ. ಅವರು ನಾವು ಪ್ರಾರಂಭಿಸಿದ ಯೋಜನೆಗಳು ಮತ್ತು ನಾವು ತಂದ ಕಾನೂನುಗಳ ಬಗ್ಗೆ ಒಂದು ಮಾತನ್ನೂ ಮಾತನಾಡುವುದಿಲ್ಲ. ಅವರು, ಮುಂದೆ ತೊಂದರೆಯನ್ನುಂಟುಮಾಡಲು ಬಯಸುತ್ತಾರೆ. ಅವರಿಗೆ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ” ಎಂದು ಗೆಹ್ಲೋಟ್ ಹೇಳಿದ್ದಾರೆ.
ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.