ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ತೀವ್ರ ವಾಗ್ವಾದದ ಬಳಿಕ ಇಂದು ಮತ್ತು ನಾಳೆ ರಾಜ್ಯಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಯಲಿದೆ. ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಾಡಿರುವ ಬಗ್ಗೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಇಂದು ಸಂವಿಧಾನದ ಬಗ್ಗೆ ಚರ್ಚೆ ನಡೆಯಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ಮೇಲ್ಮನೆ ಮತ್ತೆ ಸೇರಲಿದ್ದು, ಬಿಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಚರ್ಚೆಯನ್ನು ಪ್ರಾರಂಭಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪ್ರತಿಕ್ರಿಯೆ ನೀಡಲಿದ್ದಾರೆ.
ಇದನ್ನು ಓದಿದ್ದೀರಾ? ಅವಿಶ್ವಾಸ ನಿರ್ಣಯ | ಖರ್ಗೆ – ಧನಕರ್ ಜಟಾಪಟಿ; ‘ನಾನು ನಿಮ್ಮನ್ನು ಹೇಗೆ ಗೌರವಿಸಲಿ?’ ಎಂದ ಖರ್ಗೆ
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರಿಸುವ ನಿರೀಕ್ಷೆಯಿದೆ. ಸಂವಿಧಾನ ಬದಲಾವಣೆ ಬಗ್ಗೆ ಆಗಾಗ ಬಿಜೆಪಿ ನಾಯಕರು ಹೇಳಿಕೆ ನೀಡಿರುವ ಹಿನ್ನೆಲೆ ವಿಪಕ್ಷಗಳು ಕೇಂದ್ರ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ ಮೇಲೆ ಚರ್ಚೆ ನಡೆಸಬೇಕು ಎಂಬುದು ಪ್ರತಿಪಕ್ಷಗಳ ಬೇಡಿಕೆಯಾಗಿದೆ.
ಕಳೆದ ವಾರವಷ್ಟೇ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ರಾಜ್ಯಸಭೆಯಲ್ಲಿ ಸಭಾಪತಿಯಾಗಿ ಧನಕರ್ ಪಕ್ಷಾಪತ ಮಾಡುತ್ತಾರೆ ಎಂದು ವಿಪಕ್ಷಗಳು ಆರೋಪಿಸಿದೆ. ಇದರಿಂದಾಗಿ ಇಂದು ಮತ್ತು ನಾಳೆ (ಡಿಸೆಂಬರ್ 16, 17) ನಡೆಯುವ ರಾಜ್ಯಸಭೆಯು ವಿಪಕ್ಷ, ಆಡಳಿತ ಪಕ್ಷಗಳ ನಡುವೆ ವಾಕ್ಸಮಕ್ಕೆ ಕಾರಣವಾಗಲಿದೆ.
