ಬಿಜೆಪಿಯವರು ಜಾತಿ-ಜಾತಿಗಳಲ್ಲಿ, ಧರ್ಮ, ಧರ್ಮಗಳ ನಡುವೆ ಒಡೆದಾಳುವ ನೀತಿ ಅನುಸರಿಸುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷ ರಾಮ, ರಹೀಂ ಎಲ್ಲರೂ ಒಂದೇ ಎಂದು ನಂಬಿದೆ ಎಂದು ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಬೀದರ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಲಕ್ಷ-ವೃಕ್ಷ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರಿಗೆ ಪತ್ರಕರ್ತರು, ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡುತ್ತಿರುವುದಕ್ಕೆ ರಾಮನ ಹೆಸರು ತಳುಕು ಹಾಕುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಈ ಮೇಲಿನಂತೆ ಉತ್ತರಿಸಿದರು.
ʼರಾಮನಗರದ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆʼ ಎಂದು ತಿಳಿಸಿದರು.
ವಾಲ್ಮೀಕಿ ನಿಗಮದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ʼರಾಜ್ಯ ಸರ್ಕಾರ ತನಿಖಾ ತಂಡ ರಚಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಅದಕ್ಕೆ ರಾಜಕೀಯ ಬಣ್ಣ ಕೊಡುವ ಅವಶ್ಯಕತೆ ಇಲ್ಲ. ವಿಶೇಷ ತನಿಖಾ ತಂಡ ಆರೋಪಿಗಳನ್ನು ಪತ್ತೆ ಹಚ್ಚಿದೆ ಕಾನೂನು ಪ್ರಕಾರ ಅವರ ಮೇಲೆ ಕ್ರಮವಾಗಲಿದೆʼ ಎಂದರು.
ಬಿಜೆಪಿಯವರು ಪ್ರತಿಯೊಂದರಲ್ಲೂ ರಾಜಕೀಯ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷ ರಾಜಕೀಯ ಮಾಡಲು ಹೋಗುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಹಣ ವಸೂಲಿ ಮಾಡಿ ತಪ್ಪಿಸ್ಥರಿಗೆ ಕಾನೂನು ರೀತಿಯ ಕ್ರಮ ಆಗುತ್ತದೆʼ ಎಂದು ಹೇಳಿದರು.