ಶಂಕರಾಚಾರ್ಯರುಗಳನ್ನೂ ಹಿಂದೂ ವಿರೋಧಿಗಳು ದೇಶ ವಿರೋಧಿಗಳೆಂದು ಟ್ರೋಲ್ ಮಾಡುತ್ತಾರೆಯೇ ಎಂದು ಬಹುಭಾಷಾ ಚಿತ್ರನಟ ಕಿಶೋರ್ ಸವಾಲು ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಿಶೋರ್, “ರಾಮ ಮಂದಿರದ ರಾಜಕೀಕರಣವನ್ನು ವಿರೋಧಿಸುತ್ತಿರುವ ಶಂಕರಾಚಾರ್ಯರುಗಳು ಹಿಂದೂ ವಿರೋಧಿಗಳಲ್ಲವೆಂದರೆ ನಿಜವಾದ ಹಿಂದೂ ವಿರೋಧಿಗಳು ಯಾರು” ಎಂದು ಪ್ರಶ್ನಿಸಿದ್ದಾರೆ.
”ಅಸಲಿ ಹಿಂದೂ ವಿರೋಧಿ ಯಾರು? ಧರ್ಮದ ರಾಜಕೀಕರಣವನ್ನು ವಿರೋಧಿಸುವವರನ್ನು ಹಿಂದೂ ವಿರೋಧಿಗಳು, ದೇಶ ವಿರೋಧಿಗಳೆಂದು ಟ್ರೋಲ್ ಮಾಡುವ ವಿಶ್ವಗುರು ಭಕ್ತರು ಮತ್ತು ತನ್ನ ವೃತ್ತಿಧರ್ಮಕ್ಕೆ ದ್ರೋಹ ಬಗೆದ ಗೋದಿ ಮಾಧ್ಯಮದವರು ಈಗೇನು ಮಾಡುತ್ತಾರೆ?” ಎಂದು ಕೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನ್ನಪೂರ್ಣಿ ‘ನಿಷೇಧ’- ಧರ್ಮಗಳ ನಡುವೆ ಬೆಂಕಿ ಇಟ್ಟು ಬೇಳೆ ಬೇಯಿಸುವ ಕೃತ್ಯ
“ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ಓಟು ಬಾಚಲು ನಿಂತಿರುವ ಧೂರ್ತರು ಅವರ ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ? ಅವರ ಧರ್ಮಾಂಧತೆಯ ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಅದೇ ಆಗಿಬಿಡುವುದಿಲ್ಲವೇ? ಈ ಅಯೋಗ್ಯ ರಾಜಕಾರಣಿಗಳಿಗೆ ರಾಮ ಬರೀ ರಾಜಕೀಯ ಲಾಭಕ್ಕಾಗಿಯೇ ಇರುವ ವ್ಯಾಪಾರದ ಸರಕು ಅಷ್ಟೇ” ಎಂದು ಟೀಕಿಸಿದ್ದಾರೆ.
“ನಿಜವಾದ ದೈವವೆನ್ನುವ ನಂಬಿಕೆ ಇರುವುದು ಮಂದಿರ ಮಸೀದಿ ಚರ್ಚುಗಳಲ್ಲಲ್ಲ, ಗಾಂಧಿಯಂತೆ, ಜೀವನದ ಪ್ರತಿ ನಡೆಯಲ್ಲಿ ರಾಮ.. ಪ್ರತಿ ನುಡಿಯಲ್ಲಿ ರಾಮ.. ಸಾವಲ್ಲೂ ಹೇ ರಾಮ.. ಈ ಢೋಂಗಿಗಳಿಗೆ ಎಂದಾದರೂ ಅದು ಸಾಧ್ಯವೇ? ಎಷ್ಟೇ ಆಗಲಿ ಆ ಗಾಂಧಿಯನ್ನು ಕೊಂದವರಲ್ಲವೇ..” ಎಂದು ಕುಟುಕಿದ್ದಾರೆ.
ಅಂಧ ಭಕ್ತರಿಗೆ ನಟ ಕಿಶೋರ್ ಅವರು ನೀಡಿರುವ ‘ಗುಳಿಗೆ’ ಕಹಿಯಾಗಬಹುದು. ಕಹಿಯಾದರೂ ಪರವಾಗಿಲ್ಲ , ರೋಗ ಗುಣವಾಗಬೇಕು ಎಂದಿದ್ದರೆ ಅವರು ಈ ಗುಳಿಗೆಯನ್ನು ಸೇವಿಸಲೇಬೇಕು.